ಕುಮಟಾ: ಪಟ್ಟಣದ ರಥಬೀದಿಯ ರಾ.ರಾ. ಅಣ್ಣಾ ಪೈ ಸಭಾಭವನದಲ್ಲಿ ಮಂಗಳವಾರ ಪುರಸಭೆಯ ಆಡಳಿತ ಮಂಡಳಿಯ ಮೊದಲ ಸಾಮಾನ್ಯ ಸಭೆ ಅಧ್ಯಕ್ಷೆ ಮೋಹಿನಿ ಗೌಡ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯ ಆರಂಭದಲ್ಲೇ 2020ನೇ ಸಾಲಿನ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಜಮಾ- ಖರ್ಚಿನ ವಿಷಯ ಅನುಮೋದನೆಗಾಗಿ ಮಂಡಿಸಿದರು.
ಸದಸ್ಯ ಸಂತೋಷ ನಾಯ್ಕ ಮಾತನಾಡಿ, ಜಮಾ- ಖರ್ಚು ವಿವರ ಅರ್ಥವಾಗುವಂತಿಲ್ಲ. ಸೆಪ್ಟೆಂಬರ್ನಲ್ಲಿ ಕಾರ್ಯಕ್ರಮದ ಖರ್ಚು 74,968 ರೂ. ದಾಖಲಿಸಿದ್ದಕ್ಕೆ ವಿವರಣೆ ಬೇಕು ಎಂದರು.
ಲೆಕ್ಕಾಧಿಕಾರಿ ಲೀಲಾ ರಾಯ್ಕರ್ ಉತ್ತರಿಸಿ, ಸೆಪ್ಟೆಂಬರ್ ಮಾತ್ರವಲ್ಲ, ಹಿಂದಿನ ಕೆಲ ತಿಂಗಳಲ್ಲಿ ನಡೆಸಿದ ಕಾರ್ಯಕ್ರಮಗಳ ಖರ್ಚು ಅದರಲ್ಲಿ ಸೇರಿದೆ ಎಂದರು.
ಆದರೆ, ಅಕ್ಟೋಬರ್ನಲ್ಲಿ ಪುನಃ 1.14 ಲಕ್ಷ ರೂ. ಕಾರ್ಯಕ್ರಮ ವೆಚ್ಚ ಎಂದು ದಾಖಲಿಸಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸದಸ್ಯ ಸಂತೋಷ ನಾಯ್ಕ, ಇದರಲ್ಲಿ 13,000 ರೂ. ಕುರ್ಚಿ ವೆಚ್ಚಕ್ಕೆ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟ ವಿವರ ದೊರೆಯದ ಹೊರತು ಅನುಮೋದನೆ ನೀಡಬಾರದು ಎಂದು ಆಡಳಿತ ಮಂಡಳಿಗೆ ಒತ್ತಾಯಿಸಿದರು. ಲೆಕ್ಕಾಧಿಕಾರಿ ಸ್ಪಷ್ಟ ಮಾಹಿತಿ ನೀಡದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ ಅಧ್ಯಕ್ಷೆ ಮೋಹಿನಿ ಗೌಡ ಮಾತನಾಡಿ, ಸಭೆಯಲ್ಲಿ ಜಮಾ- ಖರ್ಚು ಅನುಮೋದನೆ ನೀಡದೇ ವಿಷಯವನ್ನು ಪರಿಶೀಲನೆಗೆ ಕಾದಿರಿಸುವಂತೆ ಸೂಚಿಸಿದರು.
ಇಂಜಿನಿಯರ್ ಪ್ರಶಾಂತ ವೆರ್ಣೆಕರ ವಿಷಯ ಪ್ರಸ್ತಾಪಿಸಿ, ಮರಾಕಲ್ ಜಂಟಿ ನೀರು ಯೋಜನೆ ಸಂಬಂಧಿಸಿ ದೀವಳ್ಳಿ ಜಾಕ್ವೆಲ್ನಲ್ಲಿ ಹೂಳು ತೆಗೆಯುವ ಕಾಮಗಾರಿ ಮಾಡಬೇಕಿದೆ. ಕಾಮಗಾರಿಗೆ ಮಂಜೂರಾತಿ ಹಾಗೂ 70 ಸಾವಿರ ರೂ. ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿದರು.
ಸದಸ್ಯ ಸಂತೋಷ ನಾಯ್ಕ, ಈಗಾಗಲೇ ಮಾಡಲಾಗಿರುವ ಹೂಳು ತೆಗೆಯುವ ಕಾಮಗಾರಿಗೆ ಈಗ ಟೆಂಡರ್ ಕರೆಯುತ್ತಿದ್ದೀರಿ ಎಂದು ಆರೋಪಿಸಿದರು. ಇದನ್ನು ಒಪ್ಪಿಕೊಂಡ ಇಂಜಿನಿಯರ್ ವೆರ್ಣೆಕರ, ತುರ್ತು ಪರಿಸ್ಥಿತಿಯಲ್ಲಿ ಕೆಲಸಗಾರರನ್ನು ಒಯ್ದು ಹೂಳನ್ನು ತೆಗೆದಿದ್ದು ಹೌದು. ಆದರೆ, ಆಡಳಿತಾತ್ಮಕ ವಿಧಾನಗಳನ್ನು ಪೂರೈಸುವುದು ಅನಿವಾರ್ಯ. ಆಡಳಿತ ಮಂಡಳಿ ಅನುಮತಿ ಬೇಕು ಎಂದರು.
ಸಿದ್ದನಬಾವಿ ಮುಖ್ಯ ರಸ್ತೆಗೆ ಇಂಟರ್ಲಾಕ್ ಅಳವಡಿಸುವ ಕಾಮಗಾರಿಗೆ ಟೆಂಡರ್ ಅಂತಿಮಗೊಳಿಸುವ ವಿಷಯ ಬಂದಾಗ ಸದಸ್ಯೆ ವಿನಯಾ ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ ಮಾಡಲಾದ ಕಾಮಗಾರಿಗೆ ಪುನಃ ಕಾಮಗಾರಿ ಮಾಡುತ್ತಿದ್ದೀರಿ. ಈ ಬಗ್ಗೆ ಲೋಕಾಯುಕ್ತ ದೂರು ಸಲ್ಲಿಕೆಯಾಗಿದ್ದು, ತನಿಖೆಯೂ ನಡೆದಿದೆ. ಅನುಮೋದನೆ ಕೊಡಬಾರದು ಎಂದರು. ಇದು ಮುಂದುವರಿದ ಕಾಮಗಾರಿಯಾಗಿದ್ದು, ಅನುಮೋದನೆ ನೀಡಬಹುದು ಎಂದು ಮುಖ್ಯಾಧಿಕಾರಿ ಸುರೇಶ ಎಂ.ಕೆ. ತಿಳಿಸಿದರು.
ಜಂಟಿ ನೀರು ಪೂರೈಕೆ ಯೋಜನೆಗೆ ಸಂಬಂಧಿಸಿ ಹೊನ್ನಾವರ ಪ.ಪಂ.ನಿಂದ ಕುಮಟಾ ಪುರಸಭೆಗೆ 80 ಲಕ್ಷ ರೂ. ಬರಬೇಕಾದ ಬಾಕಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಉಳಿದಂತೆ ವಿವಿಧ ಕಾಮಗಾರಿಗಳಿಗೆ ಅನುಮೋದನೆ, ಬಿಲ್ ಪಾವತಿ, ಸರ್ಕಾರದ ಸುತ್ತೋಲೆ ಇತರ ವಿಷಯಗಳು ಚರ್ಚೆಯಾಯಿತು. ಮಹೇಶ ನಾಯ್ಕ, ಎಂ.ಟಿ. ನಾಯ್ಕ, ಸುಮತಿ ಭಟ್, ಟೋನಿ ರೋಡ್ರಿಗಿಸ್ ಇತರರು ಮಾತನಾಡಿದರು.
ಅಧಿಕಾರಿಗಳಿಗೆ ಸದಸ್ಯರನ್ನು ಪರಿಚಯಿಸಿ
ಪುರಸಭೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮೊದಲು ವಾರ್ಡ್ ಸದಸ್ಯರ ಪರಿಚಯ ಮಾಡಿಸಿ. ಏಕೆಂದರೆ ಸದಸ್ಯರು ಸಿಬ್ಬಂದಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಭೇಟಿಯಾದಾಗ ನೀವು ಯಾರು ಎಂದು ಪ್ರಶ್ನಿಸುತ್ತಾರೆ. ಯಾವ ವಿಭಾಗದಲ್ಲಿ ಕೆಲಸ ಮಾಡುವವರು ಯಾರು ಎಂಬ ಬಗ್ಗೆ ಸರಿಯಾದ ಮಾಹಿತಿ ಬೇಕು. ಕಾರ್ಯಾಲಯದಲ್ಲಿ ಎಲ್ಲರಿಗೂ ನಮ್ಮ ಪರಿಚಯ ಮಾಡಿಸಿ ಎಂದು ಕೆಲ ಸದಸ್ಯರು ಮುಖ್ಯಾಧಿಕಾರಿಗೆ ಹೇಳಿದರು. ಸದಸ್ಯ ಟೋನಿ ರೋಡ್ರಿಗಿಸ್ ಮಾತನಾಡಿ, ಪುರಸಭೆಯಲ್ಲಿ ಏಜೆಂಟಗಿರಿ ಮಾಡುವವರು ಹೆಚ್ಚಾಗಿದ್ದಾರೆ. ಸದಸ್ಯರ ಪರಿಚಯ ಮಾಡಿಸುವ ಅಗತ್ಯವಿದೆ ಎಂದರು. ಮುಖ್ಯಾಧಿಕಾರಿ ಸುರೇಶ ಎಂ.ಕೆ. ಪ್ರತಿಕ್ರಿಯಿಸಿ, ನೀವೆಲ್ಲರೂ ಆರಿಸಿ ಬಂದು ಎರಡೂವರೆ ವರ್ಷವಾಯಿತು. ಮೂರ್ನಾಲ್ಕು ಸಭೆಗಳು ಆಗಿವೆ. ಈಗಲೂ ನಿಮ್ಮನ್ನು ಪರಿಚಯಿಸುವ ಅಗತ್ಯವಿದೆಯೇ? ಎಂದರು.