ಬೀದರ್: ನಗರದ ರಾಣಿ ಕಿತ್ತೂರು ಚೆನ್ನಮ್ಮ ವೃತ್ತ (ಮೈಲೂರು ಕ್ರಾಸ್)ದಿಂದ ಗೋರನಳ್ಳಿ ಕ್ರಾಸ್ ನ ರಿಂಗ್ ರೋಡ್ ವರೆಗೆ 3 ಕಿಮೀ ಉದ್ದ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ, ವಿವಿಧ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರು, ಉಪನ್ಯಾಸಕರ ವತಿಯಿಂದ ಪ್ರತಾಪನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹರ್ಷ ಗುಪ್ತ ಅವಡು ಡಿಸಿ ಇದ್ದಾಗ ಶಿವನಗರ ಬಳಿ ಪಾದಚಾರಿ ಮಾರ್ಗ ನಿರ್ಮಿಸಿದ್ದರು. ಚೆನ್ನಮ್ಮ ವೃತ್ತದಿಂದ ರಿಂಗ್ ರಸ್ತೆಯವರೆಗೂ ಪಾದಚಾರಿ ಮಾರ್ಗ ನಿರ್ಮಿಸಿದರೆ ವಾಯುವಿಹಾರಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಮನವಿಗೆ ಸ್ಪಂದಿಸಿ ಈ ಭರವಸೆ ನೀಡಿದರು.
ಪಾದಚಾರಿ ಮಾರ್ಗ ಸಂಬಂಧ ಶೀಘ್ರ ಯೋಜನೆ ತಯಾರಿಸಲಾಗುವುದು. ಮಂಡಳಿಯಿಂದ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸಲಾಗುವುದು. ಸರ್ಕಾರಿ ನೌಕರರ ಭವನದಲ್ಲಿ ವಿವಿಧ ಮೂಲಸೌಕರ್ಯಕ್ಕೂ ಅಗತ್ಯ ಅನುದಾನ ಕಲ್ಪಿಸಲಾಗುವುದು ಎಂದು ರೇವೂರ್ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಶಶೀಲ್ ನಮೋಶಿ, ಬೀದರ್ ಜಿಲ್ಲೆಯಿಂದ ನನಗೆ ಅಧಿಕ ಮತಗಳು ಲಭಿಸಿವೆ. ನನ್ನ ಮೊದಲ ಅನುದಾನ ಸರ್ಕಾರಿ ನೌಕರರ ಭವನದ ಕಾರ್ಯಕ್ಕೆ ಕೊಡುವೆ. ಶಿಕ್ಷಕರ ಎನ್.ಪಿ.ಎಸ್ ರದ್ದುಪಡಿಸಲು ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಲು ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕೆಆರ್ ಇ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಅಷ್ಟೂರ್, ಪ್ರಕಾಶ ಮಡಿವಾಳ, ರಾಜಕುಮಾರ ಪಾಟೀಲ್, ಬಸವರಾಜ ಜಕ್ಕಾ, ಪ್ರಭುಲಿಂಗ ತೂಗಾವೆ, ಅಶೋಕ ರೆಡ್ಡಿ, ಓಂಕಾರ ಮಲ್ಲಿಗೆ, ಸುಧಾಕರ್ ಶೇರಿಕಾರ, ಬಲವಂತ ರಾಠೋಡ್ ಇತರರಿದ್ದರು. ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಶಿವಕುಮಾರ ಬಾವಗೆ ನಿರೂಪಣೆ ಮಾಡಿದರು. ಪ್ರೊ.ರಾಜಕುಮಾರ ಹೊಸದೊಡ್ಡೆ ವಂದಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಭೀಮಾ ನದಿಯನ್ನು ಕಾರಂಜಾ ಜಲಾಶಯಕ್ಕೆ ಜೋಡಿಸಲು ಪ್ರಯತ್ನಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಸಂಸದರು ಹಾಗೂ ಶಾಸಕರ ಸಭೆ ಕರೆದು, ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆಯಡಿ ಅಭಿವೃದ್ಧಿ, ನೇಮಕಾತಿ ಹಾಗೂ ಬಡ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು.| ದತ್ತಾತ್ರೇಯ ಪಾಟೀಲ್ಕೆಕೆಆರ್ ಡಿಬಿ ಅಧ್ಯಕ್ಷ