ಜಿಲ್ಲೆ

3 ಕಿ.ಮೀ.ರಸ್ತೆಯಲ್ಲಿ 53 ಗುಂಡಿಗಳು ! ; ರಸ್ತೆಯಲ್ಲಿ ಪ್ರಾಣಕ್ಕೆ ಸಂಚಕಾರ ;  ಕಾಲ್ಟೆಕ್ಸ್ ನಿಂದ ಕುಣಿಗಲ್ ವೃತ್ತದವರೆಗಿನ ಎಸ್‌ಎಚ್-33 ರಸ್ತೆ

ತುಮಕೂರು: ವಾಹನ ಸವಾರರ ಪ್ರಾಣಕ್ಕೆ ಕಂಟಕವೆನಿಸಿರುವ ಕುಣಿಗಲ್ ರಸ್ತೆ (ಕಾಲ್ಟೆಕ್ಸ್ ನಿಂದ ಕುಣಿಗಲ್ ವೃತ್ತದವರೆಗೆ)ಯ 3 ಕಿ.ಮೀ., ಅಂತರದಲ್ಲಿ 53 ಗುಂಡಿಗಳಿವೆ. ಸಂಸದ ಜಿ.ಎಸ್.ಬಸವರಾಜು ಪ್ರತಿನಿತ್ಯ ಈ ಗುಂಡಿಮಯ ರಸ್ತೆಯಲ್ಲೇ ಸಂಚರಿಸುತ್ತಿರುವರಾದರೂ ಈ ರಸ್ತೆ ಅಧ್ವಾನ ಸಹಿಸಿಕೊಂಡು ಮೌನವಹಿಸಿರುವುದು ನಿಜಕ್ಕೂ ವಿಪರ್ಯಾಸವೆನಿಸಿದೆ. ಲೋಕೋಪಯೋಗಿ ವ್ಯಾಪ್ತಿಗೆ ಒಳಪಟ್ಟಿರುವ ರಾಜ್ಯ ಹೆದ್ದಾರಿ-33 (ಕೆ-ಶಿಪ್ ರಸ್ತೆ) ನಗರದಲ್ಲಿ ಹಾದು ಹೋಗಲಿದ್ದು ಮಹಾನಗರ ಪಾಲಿಕೆ ಈ ರಸ್ತೆ ನಿರ್ವಹಣೆ, ಅಭಿವೃದ್ಧಿ ಜವಾಬ್ದಾರಿ ಹೊಂದಿದೆ.

ನಗರದ ವಿದ್ಯೋದಯ ಕಾಲೇಜಿನ ಬಳಿಯ ಕಾಲ್ಟೆಕ್ಸ್ ವೃತ್ತದಿಂದ ಹೊರವರ್ತುಲ ರಸ್ತೆಯ ಕುಣಿಗಲ್ ವೃತ್ತದವರೆಗಿನ ತುಮಕೂರು-ಕುಣಿಗಲ್ ರಸ್ತೆಯ ಈ 3 ಕಿ.ಮೀ., ರಸ್ತೆಯಲ್ಲಿ 53 ಗುಂಡಿಗಳಿದ್ದು, ಗುಂಡಿಗಳ ನಡುವೆ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಇದೆ.

ಪಾಲಿಕೆ ನಿರ್ಲಕ್ಷೃ: ಮಳೆಗಾಲ ಮುಗಿದು 1 ತಿಂಗಳಾದರೂ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚದೆ ದ್ವಿಚಕ್ರವಾಹನ ಸವಾರರ ಪ್ರಾಣಕ್ಕೆ ಮಹಾನಗರ ಪಾಲಿಕೆ ಎರವಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ಸಾಕಷ್ಟಿವೆ. ಲಾರಿ, ಬಸ್, ಕಾರುಗಳು ಗುಂಡಿಗಳನ್ನು ತಪ್ಪಿಸಲು ಹೋಗಿ ಅವಘಡಗಳು ಸಂಭವಿಸಿದ್ದು ಜನಪ್ರತಿನಿಧಿಗಳಾಗಲಿ, ಪಾಲಿಕೆ ಅಧಿಕಾರಿಗಳಾಗಲಿ ಕಣ್ಮುಚ್ಚಿ ಕುಳಿತಿರುವುದು ಸ್ಥಳೀಯ ಆಡಳಿತಕ್ಕೆ ಕನ್ನಡಿ ಹಿಡಿದಿದೆ.

ಹೇಮಾವತಿ ನಾಲಾ ವಲಯ ಕಚೇರಿ ಮುಂಭಾಗದ ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹತ್ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಪ್ರಾಣಕ್ಕೆ ಸಂಚಕಾರ ತಂದುಕೊಂಡಿರುವ ನಿದರ್ಶನಗಳಿವೆ. ಇನ್ನು ಶಿರಡಿ ಸಾಯಿಬಾಬ ಮಂದಿರ ರಸ್ತೆ ತಿರುವಿನ ಬಳಿಯ ಗುಂಡಿಯನ್ನು ತಪ್ಪಿಸಲು ವಾಹನ ಸವಾರರು ನಿತ್ಯ ಸರ್ಕಸ್ ಮಾಡುವ ದೃಶ್ಯವಂತೂ ಭಯಾನಕವಾಗಿರಲಿದೆ. ರಸ್ತೆಯಲ್ಲಿ ಗುಂಡಿಯೋ ಗುಂಡಿಗಳಲ್ಲಿ ರಸ್ತೆಯೋ ಎಂಬ ಪರಿಸ್ಥಿತಿ ಇದೆ. ಹೇಮಾವತಿ ನಾಲಾ ವಲಯ ಕಚೇರಿ, ಅರಣ್ಯ ಇಲಾಖೆ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಹತ್ತಾರು ಸರ್ಕಾರಿ ಕಚೇರಿಗಳು ಈ ಭಾಗದಲ್ಲಿವೆ. ಹಾಗಾಗಿ, ಜನದಟ್ಟಣೆ ಹೆಚ್ಚುತ್ತಿದೆ.

ಈ ಗುಂಡಿಮಯ ರಸ್ತೆಯಲ್ಲಿ ಕುಣಿಗಲ್, ಮಂಡ್ಯ, ಮೈಸೂರು, ಹಾಸನಕ್ಕೆ ಸಾವಿರಾರು ವಾಹನಗಳು ಸಂಚರಿಸಲಿವೆ. ಸಿದ್ದಾರ್ಥ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸೇರಿ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಸಹ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಪ್ರತಿದಿನ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಸಾರ್ವಜನಿಕರು, ವಾಹನ ಸವಾರರು ಹಿಡಿ ಶಾಪ ಹಾಕುತ್ತಾ ಸಂಚರಿಸುತ್ತಿರುವುದು ಸರ್ವೇಸಾಮಾನ್ಯವೆನಿಸಿದೆ. ಈ ಹಿಂದೆ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು 20 ಲಕ್ಷ ರೂ., ವೆಚ್ಚದ ಕಾಮಗಾರಿ ಆಗಿತ್ತು. ಮಳೆಗಾಲ ಬಂದ ನಂತರ ಕುಣಿಗಲ್ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬಿದ್ದಿವೆ. ಎಂಎಲ್ಸಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈಗ ಟೆಂಡರ್ ಕರೆಯಲಾಗಿದ್ದು ಶೀಘ್ರ ರಸ್ತೆ ಗುಂಡಿ ಮುಚ್ಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಆಶಾ ಇಇ, ಮಹಾನಗರ ಪಾಲಿಕೆ ನಗರದ ಬಿ.ಎಚ್.ರಸ್ತೆಗಳಲ್ಲಿನ ಗುಂಡಿ ಮುಚ್ಚಿದ್ದು ಬಿಟ್ಟರೆ ನಗರದ ಉಳಿದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಪಾಲಿಕೆ ಮುಂದಾಗಿಲ್ಲ. 2 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು ಅಂತಿಮವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದೇನೆ. ಪಾಲಿಕೆ, ಸ್ಮಾರ್ಟ್‌ಸಿಟಿಗೆ ಈಗಾಗಲೇ ನೊಟೀಸ್ ಜಾರಿ ಮಾಡಲಾಗಿದೆ. ಎಲ್. ರಮೇಶ್ ನಾಯ್ಕ ಹೈಕೋರ್ಟ್ ವಕೀಲ ಪ್ರತೀ ವರ್ಷ ಮಳೆಗಾಲದಲ್ಲಿ ಕಾಲ್ಟೆಕ್ಸ್ ನಿಂದ ಕುಣಿಗಲ್ ರಸ್ತೆ ಸಂಪೂರ್ಣ ಹದಗೆಡುತ್ತಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಕೆ-ಶಿಪ್ ಅಧಿಕಾರಿಗಳ ಸಭೆ ಕರೆಯಲಾಗುವುದು. ವೈಟ್ ಟಾಪಿಂಗ್ ಒಂದೇ ಇದಕ್ಕೆ ಪರಿಹಾರ ಎನಿಸಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ