ಮರಿದೇವ ಹೂಗಾರ ಹುಬ್ಬಳ್ಳಿ
ನಗದು ರಹಿತ ಕ್ರಾಂತಿಗೆ ಸೈಬರ್ ಕಳ್ಳರ ಕನ್ನ ರಾಜ್ಯಾದ್ಯಂತ ಪಿಡುಗಾಗಿ ಕಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 57,601 ಪ್ರಕರಣ ದಾಖಲಾಗಿದ್ದು, 2024ನೇ ಸಾಲಿನಲ್ಲಿ 3 ಸಾವಿರ ಕೋಟಿ ರೂ. ವಂಚನೆ ಮಾಡಲಾಗಿದೆ.
ರಾಜ್ಯದಲ್ಲಿ 2022, 2023 ಹಾಗೂ 2024ರವರೆಗೆ ಒಟ್ಟು 57,601 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 12,911 ಸೈಬರ್ ವಂಚನೆ ಪ್ರಕರಣಗಳಿದ್ದು, ಇದರಲ್ಲಿ 4,543 ಆರೋಪಿಗಳು ಪತ್ತೆಯಾಗಿದ್ದಾರೆ.
2023ರಲ್ಲಿ 22,245 ಪ್ರಕರಣ ದಾಖಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಇದರಲ್ಲಿ 9,767 ಆರೋಪಿಗಳು ಪತ್ತೆಯಾಗಿದ್ದರೆ, 2024ರಲ್ಲಿ 22,445 ಪ್ರಕರಣಗಳು ದಾಖಲಾಗಿದ್ದು, 8,577 ಆರೋಪಿಗಳು ಪತ್ತೆಯಾಗಿದ್ದಾರೆ. 2024ರಲ್ಲಿ ವಂಚನೆಯಾದ 2948.22 ಕೋಟಿ ರೂ.ಗಳ ಪೈಕಿ 221.07 ಕೋಟಿ ರೂ. ಜಪ್ತಿ ಮಾಡಲಾಗಿದೆ. 186.85 ಕೋಟಿ ರೂ. ಸಂತ್ರಸ್ತರಿಗೆ ಮರಳಿಸಲಾಗಿದೆ. ಆದರೆ, 2022 ಮತ್ತು 2023ನೇ ಸಾಲಿನಲ್ಲಿ ಹಣ ಕಳೆದುಕೊಂಡವರ ಮಾಹಿತಿಯನ್ನು ಗೃಹ ಇಲಾಖೆಯು ಜನಪ್ರತಿನಿಧಿಗಳಿಗೆ ನೀಡಿಲ್ಲ. ಲೆಕ್ಕವಿಟ್ಟರೆ 9 ಸಾವಿರ ಕೋಟಿ ರೂ. ಮೀರಿರಬಹುದೆಂಬ ಊಹೆ ಜನಪ್ರತಿನಿಧಿಗಳದ್ದು.
2024ರಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ಸುಮಾರು 7,89,435 ದೂರುಗಳು ದಾಖಲಾಗಿವೆ. ಸೈಬರ್ ಪೊಲೀಸ್ ಠಾಣೆಗಳಲ್ಲಿ 22,445 ಪ್ರಕರಣಗಳು ಮಾತ್ರ ದಾಖಲಾಗಿವೆ. ಸೈಬರ್ ವಂಚನೆಯಲ್ಲಿ ಮಹಿಳೆಯರು, ನಿವೃತ್ತರಲ್ಲದೇ ದೊಡ್ಡ ಹುದ್ದೆಯಲ್ಲಿದ್ದವರೂ ಸಿಲುಕುತ್ತಿದ್ದಾರೆ. ಕೆಲವರು ದೂರು ದಾಖಲಿಸಿದೇ ಸುಮ್ಮನಾಗಿದ್ದಾರೆ. ಇದೆಲ್ಲವನ್ನೂ ಲೆಕ್ಕ ಹಾಕಿದರೆ ಪ್ರಕರಣಗಳ ಸಂಖ್ಯೆ ಹಾಗೂ ಕಳೆದುಕೊಂಡಿರುವ ಮೊತ್ತ ದುಪ್ಪಟ್ಟಾಗಬಹುದೆಂಬ ಲೆಕ್ಕಾಚಾರವಿದೆ.
ಸೈಬರ್ ವಂಚನೆಯ ಜಾಲದ ಹಿಂದೆ ಬಿದ್ದರೆ ವಂಚಕರ ಕಬಂಧಬಾಹು ಚೀನಾ, ದುಬೈ, ಥೈಯ್ಲೆಂಡ್, ಕಾಂಬೋಡಿಯಾ, ಹಾಂಕಾಂಗ್, ಲಾವೋಸ್ ಸೇರಿ ಇತರ ದೇಶಗಳವರೆಗೆ ಹರಡಿದೆ. ಇದರ ಬೆನ್ನು ಹತ್ತುವುದು ಹಾಗೂ ಆರೋಪಿಗಳಿಂದ ಹಣ ಜಪ್ತಿ ಮಾಡುವುದು ಸವಾಲಾಗಿದೆ. ಆದರೂ ಬೆಂಗಳೂರಿನಲ್ಲಿ 9 ಸೇರಿದಂತೆ ರಾಜ್ಯಾದ್ಯಂತ 45 ಸೈಬರ್ ಅಪರಾಧ ಪೊಲೀಸ್ ಠಾಣೆ ತೆರೆದಿದ್ದು, ಪತ್ತೆ ಕಾರ್ಯ ಚುರುಕುಗೊಳ್ಳಬೇಕಿದೆ.
ಸೈಬರ್ ಅಪರಾಧ ತಡೆ ಘಟಕದ ಮುಖ್ಯಸ್ಥರನ್ನಾಗಿ ಹಾಗೂ ಇವರ ಅಧೀನದಲ್ಲಿ ಡಿಐಜಿಪಿ ಅಥವಾ ಐಜಿಪಿ ಹುದ್ದೆಯ ಅಧಿಕಾರಿ ಮತ್ತು ಐವರು ಪೊಲೀಸ್ ಅಧೀಕ್ಷಕರು ಕಾರ್ಯನಿರ್ವಹಿಸುವಂತೆ ಆದೇಶವಾಗಲು ಗೃಹ ಇಲಾಖೆ ಪ್ರಸ್ತಾಪಿಸಿದೆ. ಫ್ಯಾಕ್ಟ್ ಚೆಕ್ ಯುನಿಟ್ ಮತ್ತು ಸೈಬರ್ ಟೆಕ್ನಿಕಲ್ ಯುನಿಟ್ ಸ್ಥಾಪಿಸಿ ನುರಿತ ಸೈಬರ್ ಪರಿಣಿತರನ್ನು ನೇಮಕ ಮಾಡಲು ಹಾಗೂ ಅತ್ಯಾಧುನಿಕ ಸಾಫ್ಟ್‌ವೇರ್ ಹಾಗೂ ಉಪಕರಣ ಖರೀದಿಸಲು ಕೇಳಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ 193 ವಿವಿಧ ದರ್ಜೆಯ ಹುದ್ದೆಗಳನ್ನು ಸೃಜಿಸಲು ವಾರ್ಷಿಕವಾಗಿ 12,93,90,307 ರೂ. ಆವರ್ತಕ ವೆಚ್ಚ ಮತ್ತು 62,25,00,000 ರೂ. ಅನಾವರ್ತಕ ವೆಚ್ಚ ತಗಲುವ ಬಗ್ಗೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಿನ್ನೂ ಪರಿಶೀಲನಾ ಹಂತದಲ್ಲಿದೆ ಎಂಬ ಮಾಹಿತಿ ಲಭಿಸಿದೆ.
ಅರ್ಜಿ ಸಮಿತಿಯಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದ ಚರ್ಚೆಗಳಾಗಿವೆ. ನಾನು ಕೂಡ ಇನ್ನಷ್ಟು ಮಾಹಿತಿ ಪಡೆಯಬೇಕಿದೆ. ಸೈಬರ್ ವಂಚನೆಗೆ ಒಳಗಾಗುವವರು, ಆದವರು, ವಂಚನೆ ಮಾಡುತ್ತಿರುವವರ ಮಾಹಿತಿ ಸಮಗ್ರವಾಗಿ ಸಿಗುವ ವಿಶ್ವಾಸವಿದೆ. ಮುಂದಿನ ಸಭೆಯಲ್ಲಿ ಇವೆಲ್ಲವೂ ಮಾಹಿತಿ ಪಡೆದು, ವಂಚನೆ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗುವುದು. -ಮಹೇಶ ಟೆಂಗಿನಕಾಯಿ, ಶಾಸಕರು ಹಾಗೂ ಅರ್ಜಿ ಸಮಿತಿ ಸದಸ್ಯರು