ಜಿಲ್ಲೆ

8 ವಸತಿ ನಿಲಯಕ್ಕೆ 3 ಮೇಲ್ವಿಚಾರಕರು

ವೀರೇಶ ಸೌದ್ರಿ

ಮುಂಡಗೋಡ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಬಾಲಕ, ಬಾಲಕಿಯರ ಒಟ್ಟು ಎಂಟು ಸರ್ಕಾರಿ ವಸತಿ ನಿಲಯಗಳಲ್ಲಿ ಕೇವಲ ಮೂವರು ಮೇಲ್ವಿಚಾರಕರು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಹಾಸ್ಟೆಲ್‌ಗಳಲ್ಲಿರುವ ಬಾಲಕ-ಬಾಲಕಿಯರು ತೊಂದರೆ ಅನುಭವಿಸುವಂತಾಗಿದೆ.

ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮುಂಡಗೋಡ ತಾಲೂಕಿನಲ್ಲಿ ಬಡ ಕಾರ್ಮಿ ಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಗ್ರಾಮೀಣ ಭಾಗದ ಬಡ ಮಕ್ಕಳು ವಸತಿ ನಿಲಯಗಳಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ.

ತಾಲೂಕಿನಲ್ಲಿ ಮೂರು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳು, ಎರಡು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳು, ಎರಡು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ, ಒಂದು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ಇವುಗಳಲ್ಲಿ ಮೂರು ವಸತಿ ನಿಲಯಗಳು ಮಳಗಿ ಗ್ರಾಮದಲ್ಲಿವೆ. ಉಳಿದ ಐದು ವಸತಿ ನಿಲಯಗಳು ಮುಂಡಗೋಡದಲ್ಲಿವೆ.

ಹೆಚ್ಚಾಗುತ್ತಿದೆ ಮಕ್ಕಳ ಸಂಖ್ಯೆ

ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ಐದು ವಸತಿ ನಿಲಯಗಳಿದ್ದು ಪ್ರತಿಯೊಂದು ವಸತಿ ನಿಲಯಗಳಲ್ಲಿ ತಲಾ 75 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಇನ್ನು ಮೆಟ್ರಿಕ್ ನಂತರದ ಮೂರು ವಸತಿ ನಿಲಯಗಳಲ್ಲಿ ತಲಾ 125 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಒಟ್ಟು ಎಂಟು ವಸತಿ ನಿಲಯಗಳಲ್ಲಿ 750ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.

ಪ್ರತಿಯೊಂದು ವಸತಿ ನಿಲಯಕ್ಕೂ ಒಬ್ಬೊಬ್ಬರು ಮೇಲ್ವಿಚಾರಕರು ಇರಬೇಕೆಂಬ ನಿಯಮವಿದೆ. ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಗಳಾಗದಂತೆ ಜಾಗ್ರತೆ ವಹಿಸಿಕೊಂಡು ಅವರನ್ನು ನೋಡಿಕೊಳ್ಳಲು ಮೇಲ್ವಿಚಾರಕರು ಕಡ್ಡಾಯವಾಗಿರುತ್ತಾರೆ. ಸದ್ಯ ಮಹಿಳಾ ಮೇಲ್ವಿಚಾರಕಿಯೊಬ್ಬರು ನಾಲ್ಕು ಬಾಲಕಿಯರ ವಸತಿ ನಿಲಯಗಳ ನಿರ್ವಹಣೆ ಮಾಡುತ್ತಿದ್ದರೆ ಉಳಿದ ಇಬ್ಬರು ಪುರುಷ ಮೇಲ್ವಿಚಾರಕರು ತಲಾ ಎರಡರಂತೆ ನಾಲ್ಕು ವಸತಿ ನಿಲಯಗಳನ್ನು ನಿರ್ವಹಿಸುತ್ತಿದ್ದಾರೆ.

ಮೇಲ್ವಿಚಾರಕರನ್ನು ನೇಮಿಸಿ

ಒಬ್ಬ ಮಹಿಳಾ ಮೇಲ್ವಿಚಾರಕಿ ಬಾಲಕಿಯರ ನಾಲ್ಕು ವಸತಿ ನಿಲಯಗಳನ್ನು ನಿರ್ವಹಿಸಲು ತೀವ್ರ ತೊಂದರೆಯಾಗುತ್ತದೆ. ಮೂವತ್ತು ಕಿಮೀ ಅಂತರದಲ್ಲಿರುವ ಮುಂಡಗೋಡ ಹಾಗೂ ಮಳಗಿಯಲ್ಲಿರುವ ವಸತಿ ನಿಲಯಗಳ ನಿರ್ವಹಣೆಗೆ ಮೇಲ್ವಿಚಾರಕರು ಪರದಾಡುತ್ತಿದ್ದಾರೆ. ವಸತಿ ನಿಲಯಗಳಲ್ಲಿ ಮೇಲ್ವಿಚಾರಕರನ್ನು ನೇಮಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಆದರೂ ನೇಮಕಾತಿ ಆಗಿಲ್ಲ ಎನ್ನುವ ಕೊರಗು ಅಧಿಕಾರಿಗಳದು.
ಈ ಕುರಿತು ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ವಸತಿ ನಿಲಯಗಳಿಗೆ ಐವರು ಮೇಲ್ವಿಚಾರಕರನ್ನು ನೇಮಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದು ಅವಶ್ಯವಿದೆ.

ನಾಲ್ಕು ಬಾಲಕಿಯರ ವಸತಿ ನಿಲಯಕ್ಕೆ ಒಬ್ಬರೇ ಮೇಲ್ವಿಚಾರಕರು ಇರುವುದರಿಂದ ಕೆಲವೊಮ್ಮೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಯಾರೂ ಇಲ್ಲದಂತಾಗುತ್ತದೆ. ರಾತ್ರಿ ಅನಾರೋಗ್ಯವುಂಟಾದರೂ ಹೇಳಲು ವಾರ್ಡನ್ ಇರುವುದಿಲ್ಲ. ನಮ್ಮ ವಸತಿ ನಿಲಯಕ್ಕೆ ಕೂಡಲೆ ವಾರ್ಡನ್ ನೇಮಿಸಬೇಕು.I ಹೆಸರು ಹೇಳಲಿಚ್ಛಿಸದ ಬಾಲಕಿ. ಮುಂಡಗೋಡ ತಾಲೂಕಿನಲ್ಲಿ ಎಂಟು ವಸತಿ ನಿಲಯಗಳಿವೆ. ಆದರೆ ಮೂವರು ವಾರ್ಡನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಐವರು ವಾರ್ಡನ್‌ಗಳ ಅವಶ್ಯಕತೆಯಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.I ಸುಜಾತ ಕಡತರ, ಬಿಸಿಎಂ ಇಲಾಖೆ ಮುಂಡಗೋಡ