ಭಟ್ಕಳ: ಕೆನಡಾದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ 3 ಲಕ್ಷ ರೂ. ವಸೂಲಿ ಮಾಡಿ ಆತ್ತ ಉದ್ಯೋಗವೂ ನೀಡದೇ, ಹಣವನ್ನು ಮರಳಿಸಿದೆ ವಂಚಿಸಿದ ಆರೋಪದ ಮೇಲೆ ಮಾವಳ್ಳಿ ನಿವಾಸಿ ವಿರುದ್ಧ ಕಲಘಟಗಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾವಳ್ಳಿ ಗ್ರಾಮದ ಅಂತೋನಿ ಬಸ್ತಾಂವ ಲುವಿಸ್ (54) ವಿರುದ್ಧ ಕಲಘಟಗಿ ತಾಲೂಕಿನ ತಂಬೂರ ಗ್ರಾಮದ ದರ್ಶನ ಪರವಾಪೂರ ದೂರು ನೀಡಿದ್ದಾರೆ. 2024ರ ನವೆಂಬರ್ 22ರಂದು ಅಂತೋನಿ ಬಸ್ತಾಂವ ಸಂಪರ್ಕಿಸಿ ಕೆನಡಾದಲ್ಲಿ ಲೈಬ್ರರಿ ಬಾಯ್ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಂತ ಹಂತವಾಗಿ 3 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣವನ್ನು ಮುರ್ಡೇಶ್ವರ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ. ಇತ್ತೀಚೆಗೆ ಈತ ದಾಂಡೇಲಿ, ಮುರ್ಡೇಶ್ವರ ಇತರೆಡೆ ಉದ್ಯೋಗದ ನೆಪದಲ್ಲಿ ಜನರನ್ನು ವಂಚಿಸಿದ್ದಾನೆ ಎಂಬ ಅನುಮಾನವಿದ್ದು, ಪ್ರಕರಣ ಮತ್ತಷ್ಟು ತೀವ್ರತೆ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.