ಜಿಲ್ಲೆ

ಸೋಂಕಿತನ ಸುತ್ತಲಿನ 3 ಕಿ.ಮೀ. ಸೂಕ್ಷ್ಮ ಪ್ರದೇಶ

kumarvrl

ಬೆಂಗಳೂರು: ಕರೊನಾ ವೈರಸ್ ಕಂಡುಬಂದ ವ್ಯಕ್ತಿಯ ವಾಸಸ್ಥಳದ 3 ಕಿ.ಮೀ. ವ್ಯಾಸದಲ್ಲಿನ ಪ್ರದೇಶವನ್ನು ಸೂಕ್ಷ್ಮವೆಂದು ಪರಿಗಣಿಸಿ, ಅಲ್ಲಿ ವಾಸವಿರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.

ಕರೊನಾ ಆತಂಕ ನಿವಾರಣೆ ಹಾಗೂ ಮುಂಜಾಗ್ರತೆ ಕ್ರಮವಾಗಿ ನಗರದ ರೆಸಿಡೆಂಟ್ಸ್ ವೆಲ್​ಫೇರ್ ಅಸೋಸಿಯೇಷನ್​ಗಳು, ಪಾಲಿಕೆ ವೈದ್ಯಾಧಿಕಾರಿಗಳು ಹಾಗೂ ಹೆಲ್ತ್ ಇನ್​ಸ್ಪೆಕ್ಟರ್​ಗಳ ಜತೆಗೆ ಸೋಮವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕರೊನಾ ವೈರಸ್(ಕೋವಿಡ್-19) ಜಾಗೃತಿ ಸಭೆಯಲ್ಲಿ ಮಾತನಾಡಿದರು. ಕರೊನಾ ವೈರಸ್ ದೇಹದೊಳಗೆ ಸೇರಿ 14 ದಿನಗಳ ನಂತರ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಈ ಅವಧಿಯಲ್ಲಿ ಬಾಧಿತ ವ್ಯಕ್ತಿ ಸಂರ್ಪಸಿದ ಎಲ್ಲರಿಗೂ ರೋಗ ಹರಡುತ್ತದೆ. ಹಾಗಾಗಿ ರೋಗ ಲಕ್ಷಣ ಪತ್ತೆಯಾದ ವ್ಯಕ್ತಿ ವಾಸವಿರುವ ಸ್ಥಳದ ಸುತ್ತಲಿನ 3 ಕಿ.ಮೀ. ಪ್ರದೇಶವನ್ನು ಸೂಕ್ಷ್ಮವೆಂದು ಪರಿಗಣಿಸಿ ಎಲ್ಲರನ್ನೂ ಪರೀಕ್ಷಿಸ ಲಾಗುವುದು ಎಂದರು.

8 ಕಿ.ಮೀ ವ್ಯಾಪ್ತಿಯಲ್ಲಿ ಜಾಗ್ರತೆ: ಕರೊನಾ ವೈರಸ್ ಸೋಂಕಿತ ವ್ಯಕ್ತಿ ವಾಸಸ್ಥಳದ ಸುತ್ತಲಿನ 3 ಕಿ.ಮೀ. ಸೂಕ್ಷ್ಮ ವಲಯವಾಗಿದ್ದರೆ, ಅದರ ಹೊರಗಿನ 5 ಕಿ.ಮೀ. ವ್ಯಕ್ತಿಗಳಿಗೆ ಮುಂಜಾಗ್ರತೆ ಕ್ರಮವಾಗಿ ರೋಗದ ಬಗ್ಗೆ ಅರಿವು ಮೂಡಿಸಲಾಗುವುದು. ರೋಗದ ಲಕ್ಷಣಗಳು ಕಂಡುಬಂದ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ, ಆಸ್ಪತ್ರೆಗೆ ದಾಖಲಿಸಬೇಕು. ಸೀನುವ, ಕೆಮ್ಮುವ ವ್ಯಕ್ತಿಯಿಂದ ದೂರವಿರಬೇಕು.

ಹೊರಗೆ ಹೋಗಿ ಬಂದರೆ ಕಣ್ಣು, ಬಾಯಿ, ಮೂಗು ಮುಟ್ಟಿಕೊಳ್ಳದೇ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಆಯುಕ್ತರು ಸಲಹೆ ನೀಡಿದರು.

ಎನ್-97 ಮಾಸ್ಕ್ ಅಗತ್ಯವಿಲ್ಲ: ಕರೊನಾ ವೈರಸ್ ಬಗ್ಗೆ ಭಯ ಬೇಡ. ಕೆಮ್ಮು, ಶೀತ ಹಾಗೂ ಜ್ವರ ಕಂಡುಬಂದವರು ತಮ್ಮ ಉಸಿರು, ಕೆಮ್ಮುವುದು ಹಾಗೂ ಸೀನುವಾಗ ಇತರರಿಗೆ ತಾಗದಂತೆ ಜಾಗ್ರತೆ ವಹಿಸುವ ದೃಷ್ಟಿಯಿಂದ ರೋಗಿಗಳು ಮಾಸ್ಕ್ ಧರಿಸಬೇಕು. ಎನ್-97 ಮಾಸ್ಕ್ ಧರಿಸುವ ಅಗತ್ಯವಿಲ್ಲ. ಕರೊನಾ ವೈರಸ್ ಸ್ವಲ್ಪ ದೊಡ್ಡ ಗಾತ್ರದಾಗಿದ್ದು, ಶಸ್ತ್ರಚಿಕಿತ್ಸೆಗೆ ಬಳಸುವ ಸಾಮಾನ್ಯ ಮೂರು ಪದರಿನ ಮಾಸ್ಕ್ ಬಳಸಬಹುದಾಗಿದೆ. ಅನಗತ್ಯ ಮಾಸ್ಕ್ ಖರೀದಿಸಿ ಸ್ಟಾಕ್ ಖಾಲಿ ಮಾಡುವುದು ಬೇಡ ಎಂದು ಆಯುಕ್ತರು ಸಲಹೆ ನೀಡಿದರು.

ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮತಿ ಅಧ್ಯಕ್ಷ ಎಲ್. ಶ್ರೀನಿವಾಸ್, ವಿಶೇಷ ಆಯುಕ್ತರಾದ ಡಾ.ರವಿಕುಮಾರ್ ಸುರಪುರ, ಡಿ.ರಂದೀಪ್, ಆರೋಗ್ಯಾಧಿಕಾರಿಗಳಾದ ಡಾ.ವಿಜಯೇಂದ್ರ, ಡಾ. ನಿರ್ಮಲಾ ಬುಗ್ಗಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.