ಜಿಲ್ಲೆ

ರಾಜ್ಯ ಪ್ರತಿನಿಧಿಸಿದ್ದ ವಿದ್ಯಾರ್ಥಿಗಳಿಗೆ ಚಿನ್ನದ 3 ಪದಕ

ಹೊಳೆನರಸೀಪುರ: ಹರಿಯಾಣ ರಾಜ್ಯದ ಪಂಚ ಕುಲದ ಒಲಿಂಪಿಕ್ ಭವನದ ಸೆಕ್ಟರ್-3ರಲ್ಲಿ ಡಿ.7ರಿಂದ 9ರವರೆಗೆ ಆಯೋಜಿಸಿದ್ದ 25ನೇ ರಾಷ್ಟ್ರ ಮಟ್ಟದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಪಟ್ಟಣದ ಸ್ಕ್ವಾಯ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು 3 ಚಿನ್ನ, 2 ಬೆಳ್ಳಿ, ಮೂರು ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಆದರ್ಶ ಶಾಲೆಯ ಡಿ.ವಿ.ಸೋಹನ್ ಮೌರ್ಯ ಕವಾಂಕಿಯಲ್ಲಿ ಚಿನ್ನದ ಪದಕ, ಗ್ರೀನ್‌ವುಡ್ ಆಂಗ್ಲ ಮಾಧ್ಯಮ ಶಾಲೆಯ ಎಚ್.ವೈ.ಮೋಹನ್‌ಕುಮಾರ್ ಕವಾಂಕಿಯಲ್ಲಿ ಚಿನ್ನದ ಪದಕ, ಲೋಬೋದಲ್ಲಿ ಬೆಳ್ಳಿಯ ಪದಕ, ವೆಂಕಟೇಶ್ವರ ವಿದ್ಯಾಸಂಸ್ಥೆಯ ಎಚ್.ಆರ್.ಪ್ರೀತಂ ಕವಾಂಕಿಯಲ್ಲಿ ಬೆಳ್ಳಿಯ ಪದಕ, ಲೋಗೋದಲ್ಲಿ ಚಿನ್ನದ ಪದಕ, ಹಾಸನ ವಿದ್ಯಾಸೌಧ ಸಂಸ್ಥೆಯ ದಿವಿತ್ ವೈ.ಗೌಡ ಕಂಚಿನ ಪದಕ, ವಾಸವಿ ವಿದ್ಯಾಸಂಸ್ಥೆಯ ಎಂ.ನಿತಿನ್ ಕಂಚಿನ ಪದಕ, ಎಲ್.ರೀತು, ಎರಡು ಸ್ಪರ್ಧೆಗಳಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಕರ್ನಾಟಕ ರಾಜ್ಯ ತಂಡದ ಸ್ಕ್ವಾಯ್ ಕೋಚ್ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಎಲ್.ಎಸ್. ಹರ್ಷವರ್ಧನ್ ಮಾರ್ಗದರ್ಶನ ನೀಡಿದ್ದರು. ಈ ವಿದ್ಯಾರ್ಥಿಗಳಿಗೆ ಸ್ಕ್ವಾಯ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಹೈ ತರಬೇತಿ ನೀಡಿದ್ದರು. ಈ ಮಕ್ಕಳ ಸಾಧನೆಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಸಂಘ ಸಂಸ್ಥೆಯವರು ಅಭಿನಂದಿಸಿದ್ದಾರೆ.