ಜಿಲ್ಲೆ

ದ.ಕ 3 ಪಾಸಿಟಿವ್ ಕೇಸ್, ಮೂವರು ಡಿಸ್ಚಾರ್ಜ್

Dakshina Kannada

ಮಂಗಳೂರು: ಮಹಾರಾಷ್ಟ್ರದಿಂದ ಬಂದ 8 ವರ್ಷದ ಬಾಲಕ ಸೇರಿದಂತೆ ದ.ಕ ಜಿಲ್ಲೆಯಲ್ಲಿ ಸೋಮವಾರ ಒಟ್ಟು ಮೂವರಿಗೆ ಕರೊನಾ ದೃಢಪಟ್ಟಿದೆ.

ಮೇ 14ರಂದು ಮುಂಬೈನಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿರಿದ್ದು ಮಂಗಳೂರಿಗೆ ಆಗಮಿಸಿದ್ದ 8 ವರ್ಷದ ಬಾಲಕನ ಗಂಟಲು ದ್ರವ ಮಾದರಿ ಪಾಸಿಟಿವ್ ಆಗಿದೆ. ಮೇ 16ರಂದು ಮುಂಬೈನಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್ ಆಗಿದ್ದು ಅದನ್ನು ಪೂರೈಸಿ ಮೂಡುಬಿದಿರೆಗೆ ಆಗಮಿಸಿದ್ದ 52 ವರ್ಷದ ಗಂಡಸಿಗೆ ಕೂಡ ಕರೊನಾ ಪಾಸಿಟಿವ್ ಆಗಿದೆ. ದುಬೈನಿಂದ ಜೂನ್ 1ರಂದು ಆಗಮಿಸಿ ಹೋಟೆಲ್‌ನಲ್ಲಿ ನಿಗಾವಣೆಯಲ್ಲಿದ್ದ 23ರ ಯುವಕನಿಗೂ ಸೋಂಕು ದೃಢಪಟ್ಟಿದೆ.

ಕರೊನಾ ಚಿಕಿತ್ಸೆ ಪೂರ್ಣಗೊಳಿಸಿ ಗುಣವಾದ ಮೂವರನ್ನು ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಗೊಳಿಸಲಾಗಿದೆ.

ಸೋಮವಾರ 27 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ, 217 ಸ್ಯಾಂಪಲ್ ಕಳುಹಿಸಲಾಗಿದ್ದು ಬಂದಿರುವ 134ರಲ್ಲಿ ಮೂರು ಪಾಸಿಟಿವ್ ಆಗಿದೆ. 104ರ ವರದಿ ಬಾಕಿ ಇದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 185ಕ್ಕೆ ಏರಿಕೆಯಾಗಿದೆ, ಸಕ್ರಿಯ ಪ್ರಕರಣಗಳು 89 ಆಗಿದ್ದು ಅವರೆಲ್ಲರ ಆರೋಗ್ಯಸ್ಥಿತಿ ತೃಪ್ತಿಕರ.

ವಲಸೆ ಕಾರ್ಮಿಕರ ಹೆಲ್ಪ್‌ಡೆಸ್ಕ್: ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಜಿಲ್ಲಾಮಟ್ಟದಲ್ಲಿ ನೋಂದಣಿ ಕೇಂದ್ರ/ಹೆಲ್ಪ್ ಡೆಸ್ಕನ್ನು ಮಂಗಳೂರು ಪುರಭವನದಲ್ಲಿ ತೆರೆಯಲಾಗಿದೆ. ವಲಸೆ ಕಾರ್ಮಿಕರು ಅಲ್ಲಿಗೆ ತೆರಳಿ ನೋಂದಣಿ ಮಾಡಿಕೊಳ್ಳಬಹುದು.

ಕಾಸರಗೊಡಿನ 8 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯ 8 ಮಂದಿ ಒಳಗೊಂಡಂತೆ ಕೇರಳದಲ್ಲಿ ಸೋಮವಾರ 91 ಮಂದಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಇವರಲ್ಲಿ 73 ಮಂದಿ ವಿದೇಶದಿಂದ, 15 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಒಬ್ಬರಿಗೆ ಸಂಪರ್ಕದಿಂದ ಹಾಗೂ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ಕಾಸರಗೋಡಿನ ಐದು ಮಂದಿ ಗುಣಮುಖರಾಗಿದ್ದಾರೆ.