ಜಿಲ್ಲೆ

ಯೆಮನ್‌ನ ಪ್ರಜೆ ತಲೆಯಲ್ಲಿತ್ತು 3 ಸೆಂ.ಮೀ. ಗುಂಡು!

ಬೆಂಗಳೂರು: ಯೆಮನ್‌ನ 29 ವರ್ಷದ ವ್ಯಕ್ತಿಯ ತಲೆಯಲ್ಲಿದ್ದ 3 ಸೆಂ.ಮೀ. ಗುಂಡನ್ನು ಕಿವಿಯ ಮೂಲಕ ಹೊರತೆಗೆಯುವಲ್ಲಿ ಜೆ.ಪಿ. ನಗರದ ಖಾಸಗಿ ಆಸ್ಪತ್ರೆಯ ಇಎನ್‌ಟಿ ತಜ್ಞರು ಯಶಸ್ವಿಯಾಗಿದ್ದಾರೆ.


18 ವರ್ಷಗಳ ಹಿಂದೆ ಯೆಮನ್‌ನಲ್ಲಿ ನಡೆದ ಸಂಘರ್ಷದಲ್ಲಿ ವ್ಯಕ್ತಿಯ ತಲೆಗೆ ಗುಂಡು ತಗುಲಿತ್ತು. ಇದರಿಂದಾಗಿ ಅವರು ತೀವ್ರ ತಲೆ ನೋವಿನಿಂದ ಬಳಲುತ್ತಿದ್ದರು. ಗಾಯದ ಪರಿಣಾಮ ಶಾಶ್ವತ ಕಿವುಡುತನಕ್ಕೂ ಒಳಗಾಗಿದ್ದರು. ಸೂಕ್ತ ಚಿಕಿತ್ಸೆಗಾಗಿ ಅಲೆದಾಡಿದ ಅವರು, ಅಂತಿಮವಾಗಿ ಉದ್ಯಾನನಗರಿಗೆ ಬಂದರು. ಡಾ. ರೋಹಿತ್ ಉದಯ ಪ್ರಸಾದ್, ಡಾ. ವಿನಾಯಕ್ ಕುರ್ಲೆ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.


ಇಬ್ಬರು ಮಕ್ಕಳ ತಂದೆಯಾದ ವ್ಯಕ್ತಿ, ಯೆಮನ್‌ನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಇದೀಗ ರೋಗಿ ಚೇತರಿಸಿಕೊಂಡು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ ಎಂದು ಡಾ. ರೋಹಿತ್ ಉದಯ ಪ್ರಸಾದ್ ತಿಳಿಸಿದ್ದಾರೆ.