ಜಿಲ್ಲೆ

ಶಾಲೆ ಮೇಲ್ಛಾವಣಿ ಕುಸಿದು 3 ಮಕ್ಕಳಿಗೆ ಗಾಯ: ಪೇಜಾವರ ಪಡ್ಪುವಿನಲ್ಲಿ ಘಟನೆ : ಅನುದಾನಿತ ಸ್ಕೂಲ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸಂಸ್ಥೆ

ವಿಜಯವಾಣಿ ಸುದ್ದಿಜಾಲ ಗುರುಪುರ

ಬಜ್ಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೇಜಾವರ ಪಡ್ಪು ಎಂಬಲ್ಲಿ ಖಾಸಗಿ ಎಲ್‌ಕೆಜಿ, ಯುಕೆಜಿ ಶಾಲೆಯೊಂದರ ಮೇಲ್ಛಾವಣಿ ಸೋಮವಾರ ಮಧ್ಯಾಹ್ನ ಕುಸಿದು ಬಿದ್ದು, ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ.

ಪೇಜಾವರ ಪಡ್ಡು ಎಂಬಲ್ಲಿ ಈ ಹಿಂದೆ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆ ಇತ್ತು. ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಶಾಲೆ ಮುಚ್ಚಲಾಗಿತ್ತು. ಇದೀಗ ಊರಿನ ಕೆಲಮಂದಿ ಸೇರಿಕೊಂಡು ಶಾಲೆಯ ಹಳೇ ಕಟ್ಟಡದಲ್ಲಿ ಎಲ್‌ಕೆಜಿ, ಯುಕೆಜಿ ಆಂಗ್ಲ ಮಾಧ್ಯಮ ಶಾಲೆ ತೆರೆದಿದ್ದು, ಇಲ್ಲಿ ಸುಮಾರು 25 ಮಕ್ಕಳು ಕಲಿಯುತ್ತಿದ್ದಾರೆ.

ಹೊಸದಾಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಮುಂಚೆ ಶಾಲಾ ಕಟ್ಟಡ ದುರಸ್ತಿ ಮಾಡಲಾಗಿತ್ತು. ಈಗ ಸುರಿಯುತ್ತಿರುವ ಮಳೆಗೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಪಕ್ಕಾಸು, ರೀಪು, ಹೆಂಚು ಕುಸಿದು ಬಿದ್ದಿದೆ. ಮಧ್ಯಾಹ್ನ ಸುಮಾರು 12ರ ಹೊತ್ತಿಗೆ ಘಟನೆ ಸಂಭವಿಸಿದ್ದು, ಆ ವೇಳೆ ಕಟ್ಟಡದಲ್ಲಿ ಸುಮಾರು 20ರಷ್ಟು ಮಕ್ಕಳಿದ್ದರು. ಎಲ್ಲರೂ ಕಟ್ಟಡದಿಂದ ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಶೋನಿತ್ ಸಹಿತ ಮೂವರು ಮಕ್ಕಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳೂರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ದಾರೆ. ಬಜ್ಪೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಶಾಂತಲಾ, ಕಂದಾಯ ಅಧಿಕಾರಿ ರವಿ, ಇಂಜಿನಿಯರ್ ನಳಿನ್, ಬಜ್ಪೆ ಆರೋಗ್ಯಾಧಿಕಾರಿ ಹಾಗೂ ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ರೈತ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್, ಬಜ್ಪೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.