ಕಡಬ: ತಾಲೂಕು ಕೇಂದ್ರವಾಗಿರುವ ಕಡಬದ ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 3 ಎಕರೆ ಜಮೀನು ಕಾದಿರಿಸಲಾಗಿದ್ದು, ದ.ಕ. ಜಿಲ್ಲಾ ಪಧಾನ ಸತ್ರ ನ್ಯಾಯಾಧೀಶ ರವೀಂದ್ರ ಎಂ.ಜೋಶಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಬ ತಾಲೂಕು ಕೇಂದ್ರಕ್ಕೆ ಸಿವಿಲ್ ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರ ವಸತಿಗೃಹ, ವಕೀಲರ ಭವನ ಹಾಗೂ ನ್ಯಾಯಾಲಯ ಸಿಬ್ಬಂದಿಯ ವಸತಿಗೃಹಗಳ ನಿರ್ಮಾಣಕ್ಕೆ ಕಾದಿರಿಸಿರುವ ಜಮೀನು ಪೊಲೀಸ್ ಹಾಗೂ ಕಂದಾಯ ಇಲಾಖೆ ಕಚೇರಿಗಳಿಗೆ ಹತ್ತಿರದಲ್ಲಿದೆ. ಸಾರ್ವಜನಿಕರಿಗೆ ಬಂದು ಹೋಗಲು ಅನುಕೂಲಕರವಾಗಿದೆ. ಈ ಕುರಿತು ಪರಿಶೀಲನಾ ವರದಿಯನ್ನು ಹೈಕೋರ್ಟ್‌ಕ್ಕೆ ಸಲ್ಲಿಸಲಾಗುವುದು. ಅಲ್ಲಿಂದ ಬರುವ ಆದೇಶದನ್ವಯ ಆದಷ್ಟು ಶೀಘ್ರ ಕೆಲಸ ಆರಂಭಿಸಲಾಗುವುದು ಎಂದರು.
ಕಡಬ ವಕೀಲರ ಬಳಗದ ಮುಂದಾಳು ಶಿವಪ್ರಸಾದ್ ಪುತ್ತಿಲ ಮಾತನಾಡಿ, ಕಡಬ ತಾಲೂಕಿನ ಜನರು ನ್ಯಾಯಾಲಯದ ಕಲಾಪಗಳಿಗಾಗಿ ಸುಳ್ಯ ಹಾಗೂ ಪುತ್ತೂರಿಗೆ ಅಲೆಯುವುದನ್ನು ತಪ್ಪಿಸಲು ಕಡಬದಲ್ಲಿಯೇ ನ್ಯಾಯಾಲಯ ಸಂಕೀರ್ಣ ಶೀಘ್ರ ಪ್ರಾರಂಭವಾಗಬೇಕು. ನೂತನ ಕಟ್ಟಡ ನಿರ್ಮಾಣವಾಗಲು ಕಾಲಾವಕಾಶ ಬೇಕಿರುವುದರಿಂದ ಜನರ ಅನುಕೂಲಕ್ಕೆ ಖಾಸಗಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯವನ್ನು ಆದಷ್ಟು ಬೇಗ ಆರಂಭಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ, ಕಡಬದಲ್ಲಿ ಶೀಘ್ರ ನ್ಯಾಯಾಲಯ ಸಂಕೀರ್ಣ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಒತ್ತಡ ಹೇರುವುದಾಗಿ ತಿಳಿಸಿದರು.
ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಪಾಟಾಳಿ, ಕಡಬ ವಕೀಲರ ಬಳಗದ ಪ್ರಮುಖರಾದ ಲೋಕೇಶ್ ಎಂ.ಜೆ.ಕೊಣಾಜೆ, ಕೃಷ್ಣಪ್ಪ ಗೌಡ ಕಕ್ವೆ, ರಶ್ಮಿ ಜಿ., ಅಶ್ವಿತ್ ಖಂಡಿಗ, ನಾರಾಯಣ ಜಿ.ಕೆ., ಅವಿನಾಶ್ ಬೈತಡ್ಕ, ಗುರುಚರಣ್ ಕೊಪ್ಪಡ್ಕ, ಹರೀಶ್ ಕೆ.ಎಸ್., ಪ್ರಶಾಂತ್ ಪಂಜೋಡಿ, ಕಾಂಗ್ರೆಸ್ ಮುಂದಾಳು ವಿಜಯಕುಮಾರ್ ರೈ ಕರ್ಮಾಯಿ, ಬಿಜೆಪಿ ಮುಂದಾಳು ಸತೀಶ್ ನಾಯಕ್ ಕಡಬ ಮೊದಲಾದವರು ಇದ್ದರು.
ತಾಲೂಕು ಆಡಳಿತಸೌಧಕ್ಕೆ ಭೆೇಟಿ ನೀಡಿದ ನ್ಯಾಯಾಧೀಶರು ಜಮೀನಿನ ಕಾಗದ ಪತ್ರಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು. ಕಡಬ ಪ್ರಭಾರ ತಹಸೀಲ್ದಾರ್ ಮಂಜುನಾಥ್ ಹಾಗೂ ಉಪ ತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಮಾಹಿತಿ ನೀಡಿದರು. ಕಾದಿರಿಸಿದ ಜಮೀನಿನಲ್ಲಿ ಕಟ್ಟಡ ನಿರ್ಮಾಣವಾಗುವ ಮೊದಲು ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಕಲಾಪ ಆರಂಭಿಸುವ ಸಾಧ್ಯತೆಗಳಿದ್ದರೆ ಬಳಸಬಹುದಾದ ಖಾಸಗಿ ಕಟ್ಟಡಗಳನ್ನು ಕೂಡ ನ್ಯಾಯಾಧೀಶರು ವಕೀಲರ ಜತೆ ತೆರಳಿ ಪರಿಶೀಲನೆ ನಡೆಸಿದರು.