ಜಿಲ್ಲೆ

ಸಿಬಿಐ ಪೊಲೀಸರ ಹೆಸರಲ್ಲಿ ವೈದ್ಯರೊಬ್ಬರಿಗೆ 3.71 ಕೋಟಿ ರೂ. ವಂಚನೆ, ಆರ್​ಟಿಜಿಎಸ್ ಮೂಲಕ ಹಣ ಪೀಕಿದ ಖದೀಮರು

ರಾಣೆಬೆನ್ನೂರ: ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡು ಖಾತೆಯ ಹಣ ಪರಿಶೀಲಿಸುವ ನೆಪದಲ್ಲಿ ನಗರದ ವೈದ್ಯರೊಬ್ಬರ ಖಾತೆಯಿಂದ ಬರೋಬ್ಬರಿ 3.71 ಕೋಟಿ ರೂ. ಆರ್​ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಹಾವೇರಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಸ್ಟೇಷನ್ ರಸ್ತೆಯ ಸಂಜೀವಿನಿ ನರ್ಸಿಂಗ್ ಹೋಮ್ ಡಾ. ಭೀಮಸೇನ ಶ್ರೀನಿವಾಸ ಕರ್ಜಗಿ (83) ಮೋಸ ಹೋದವರು.

ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಮಾಡಿ ‘ನಾನು ಸಿಬಿಐ ಮುಂಬೈ ಇನ್​ಸ್ಪೆಕ್ಟರ್ ದೀಕ್ಷಿತ್ ಗಡಾದ ಅಂತಾ ಮಾತನಾಡುತ್ತಿದ್ದೇನೆ. ನರೇಶ ಗೋಯಲ್ ಎನ್ನುವ ವ್ಯಕ್ತಿ ಮುಂಬೈ ವ್ಯಕ್ತಿಯೊಬ್ಬನ ಮೇಲೆ ಬ್ಯಾಂಕ್ ಚೀಟಿಂಗ್ ಮತ್ತು ಮನಿ ಲ್ಯಾಂಡರ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾನೆ. ಅವನು ಮುಂಬೈನ ಕೆನರಾ ಬ್ಯಾಂಕ್​ನ ಭೀಮಸೇನ ಕರ್ಜಗಿ ಹೆಸರಿನಿಂದ ಹಣ ತೆಗೆದಿದ್ದಾನೆ. ನೀವು ಯಾವಾಗ ಇಲ್ಲಿ ಖಾತೆ ತೆಗೆದಿದ್ದೀರಿ ಹೇಳಿ’ ಎಂದು ಡಾ. ಭೀಮಸೇನ ಅವರಿಗೆ ಬೆದರಿಸಿದ್ದಾನೆ.

ಅಲ್ಲದೆ, ಅವರ 10 ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾನೆ. ನಂತರ ಖಾತೆಗಳ ವೆರಿಫಿಕೇಷನ್ ಮಾಡಬೇಕು ಎಂದು ಹೇಳಿ ಎಲ್ಲ ಖಾತೆಗಳಿಂದ ಒಟ್ಟು 3.71 ಕೋಟಿ ರೂ. ಹಣವನ್ನು ಆರ್​ಟಿಜಿಎಸ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.