ತೀರ್ಥಹಳ್ಳಿ: ಅಡಕೆ ಬೆಳೆಗಾರರ ಹಿತ ಕಾಯಬೇಕಾದ ಮ್ಯಾಮ್ಕೋಸ್ ಸಂಸ್ಥೆ ಸಹಕಾರ ಕಾಯ್ದೆಯನ್ನು ಉಲ್ಲಂಘಿಸಿ ಷೇರುದಾರ ರೈತರನ್ನು ವಂಚಿಸುತ್ತಿದೆ. ನಿಯಮ ಬಾಹಿರವಾಗಿ ಷೇರುದಾರರ ಸಭೆ ನಡೆಸಿ ಸಂಸ್ಥೆಗೆ 3.60 ಕೋಟಿ ರೂ.ನಷ್ಟ ಮಾಡಿದೆ ಎಂದು ಸಹಕಾರ ವೇದಿಕೆ ಮುಖಂಡ ಕಡ್ತೂರು ದಿನೇಶ್ ಆರೋಪಿಸಿದರು.
ಸುಮಾರು 29 ಸಾವಿರ ಷೇರುದಾರರು ಮ್ಯಾಮ್ಕೋಸ್‌ನ ವಿವಿಧ ಶಾಖೆಗಳಲ್ಲಿ ಸದಸ್ಯರಾಗಿದ್ದಾರೆ. 2005ರಿಂದ ಸರ್ವ ಸದಸ್ಯರ ಸಭೆಗೂ ಮುನ್ನ ಷೇರುದಾರರ ಸಭೆ ನಡೆಸುವುದು ಸಹಕಾರ ಕಾಯ್ದೆ ಅನ್ವಯ ಅಸಿಂಧುವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಹಕಾರ ಭಾರತಿ ಹೆಸರಿನಲ್ಲಿ ಆಡಳಿತಕ್ಕೆ ಬಂದವರು ಬಿಜೆಪಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಿಯಮ ಮೀರಿದ ಸಭೆಗಳಲ್ಲದೆ ಹಲವಾರು ಅಕ್ರಮಗಳು ನಡೆದಿದೆ. ಸರ್ಕಾರ ಈ ವಿಷಯದ ಕುರಿತು ಉಪ ನಿಯಮಗಳ ತಿದ್ದುಪಡಿ ಪ್ರಸ್ತಾವನೆ ತಿರಸ್ಕರಿಸಿದೆ. ನಷ್ಟದ ಮೊತ್ತವನ್ನು ಅಧಿಕಾರದ ಕಾಲಾವಧಿಯ ನಿರ್ದೇಶಕರು ಭರಿಸಬೇಕು ಎಂದು ಆಗ್ರಹಿಸಿದರು.
ಅಕ್ರಮಗಳ ತನಿಖೆಗೆ ಸರ್ಕಾರ ವಿಶೇಷ ಸಮಿತಿ ರಚಿಸಬೇಕು. ಮ್ಯಾಮ್ಕೋಸ್ ಆಡಳಿತದ ನಿಯಮ ಬಾಹಿರ, ಅಧಿಕಾರ ದುರುಪಯೋಗ ಕುರಿತು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಮುಖಂಡರಾದ ಟಿ.ಎಲ್.ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ಆದರ್ಶ ಹುಂಚದಕಟ್ಟೆ, ಪೂರ್ಣೇಶ್ ಕೆಳಕೆರೆ, ಹೊನಗಾರು ಶಿವಪ್ಪ, ಕಡ್ತೂರು ಮೋಹನ್ ಇದ್ದರು.