ಜಿಲ್ಲೆ

3.5 ಕೋಟಿ ರೂ.ವೆಚ್ಚದಲ್ಲಿ ವಿವಿಧ ಯೋಜನೆ

ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಗ್ರಾಮಗಳ ಅಭಿವೃದ್ಧಿಗೂ ಒತ್ತು ನೀಡಿದಂತೆ ಹನಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ 3.5 ಕೋಟಿ ರೂ.ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.


ತಾಲೂಕಿನ ಸಂಶೆಟ್ಟಿಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಮನವಿಗೆ ಸ್ಪಂದಿಸಿ ಈಗಾಗಲೇ ಕ್ಷೇತ್ರಕ್ಕೆ 25 ಕೋಟಿ ರೂ.ಅನುದಾನ ನೀಡಿದ್ದಾರೆ. ಈ ಅನುದಾನದಲ್ಲಿ 84 ಗ್ರಾಮಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಬಳಕೆ ಮಾಡಲಾಗುತ್ತಿದೆ. ಹನಿಕೆ ರಸ್ತೆಗೆ ಸಂಪರ್ಕ ಕಲ್ಪಿಸಲು 60 ಲಕ್ಷ ರೂ. ಕಾಮಗಾರಿ ಪ್ರಗತಿಯಲ್ಲಿದೆ. ಮಲೆನಾಡು ಸೇರಿದಂತೆ ಅರೆ ಮಲೆನಾಡು ಹಾಗೂ ಬಯಲು ಸೀಮೆಗೆ ಎತ್ತಿನಹೊಳೆ, ಕಾವೇರಿ ನೀರಾವರಿ ನಿಗಮದ ಅನುದಾನದಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಈ ಭಾಗದ ಹನಿಕೆ, ನಾರಾಯಣಪುರ, ಹೆಬ್ಬಾಳು, ಯಲಹಂಕ, ರಾಜನಶಿರಿಯೂರು, ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ಕ್ಕೂ ಅಧಿಕ ಕೆರೆಗಳನ್ನು ತುಂಬಿಸಲು ಹೆಬ್ಬಾಳು ಏತ ನೀರಾವರಿ ಯೋಜನೆ ಬಗ್ಗೆ ಕೆಲ ದಿನಗಳ ಹಿಂದೆ ಪುಷ್ಪಗಿರಿ ಮಠದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಪ್ರಸ್ತಾಪಿಸಿದ್ದಾರೆ. ಸದ್ಯದಲ್ಲೇ ಸಂಪುಟದಿಂದ ಅನುಮೋದನೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಜೆಡಿಎಸ್ ಮುಖಂಡ ಕನಾಯ್ಕನಹಳ್ಳಿ ಮಹಾದೇವ್ ಮಾತನಾಡಿ, ಕೆ.ಎಸ್.ಲಿಂಗೇಶ್ ಅವರು ಶಾಸಕರಾದ ನಂತರ ಕ್ಷೇತ್ರದ 480 ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ವಿಶೇಷವಾಗಿ ಯಗಚಿ ಜಲಾಶಯದ ಸಮೀಪದ ನಾರಾಯಾಣಪುರ, ಹನಿಕೆ ಮತ್ತು ಬಂಟೇನಹಳ್ಳಿ ಗ್ರಾಮದ ಪಂಚಾಯಿತಿ ವ್ಯಾಪ್ತಿಗೆ ನೀಡಿದ ಅನುದಾನ ನಿಜಕ್ಕೂ ಶ್ಲಾಘನೀಯ. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲದ ಸಂದರ್ಭದಲ್ಲೂ ಎಲ್ಲರ ವಿಶ್ವಾಸ ಪಡೆದು 1,800 ಕೋಟಿ ರೂ.ಗೂ ಅಧಿಕ ಅನುದಾನ ತರುವ ಮೂಲಕ ಬೇಲೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.

ಹನಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಪ್ರಸನ್ನ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ರವಿಕುಮಾರ್, ಜೆಡಿಎಸ್ ಮುಖಂಡರಾದ ದೊಡ್ಡವೀರೇಗೌಡ, ಹರೀಶ್ ಗ್ರಾಪಂ ಸದಸ್ಯರಾದ ಗುರುಮೂರ್ತಿ, ಮೋಹನ್, ಮಾಜಿ ಅಧ್ಯಕ್ಷ ಪರಮೇಶ್, ಹನಿಕೆ ಸೊಸೈಟಿ ಉಪಾಧ್ಯಕ್ಷ ಚಂದ್ರಶೇಖರ್, ಇಂಜಿನಿಯರ್ ಪುನೀತ್, ತೀರ್ಥಣ್ಣ, ಶೇಖರಣ್ಣ, ಪಿಡಿಒ ಹರ್ಷ ಇತರರಿದ್ದರು.