ಜಿಲ್ಲೆ

3.0 ಚಿತ್ರ 14ರಂದು ರಾಜ್ಯಾದ್ಯಂತ ತೆರೆಗೆ

ಮೈಸೂರು: ಒಬ್ಬ ಯುವತಿ, ಮೂವರು ಯುವಕರ ಸುತ್ತ ನಡೆಯುವ ಕ್ರೈಂ-ಥ್ರಿಲ್ಲರ್ ಕಥಾಹಂದರ ‘3.0’ ಚಿತ್ರ ರಾಜ್ಯಾದ್ಯಂತ ಅ.14ರಂದು ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಇಂದ್ರಜಿತ್ ಹೇಳಿದರು.
ವಿಂಟೇಜ್ ಪಾಯಿಂಟ್ ಚಿತ್ರದ ಚಿಕ್ಕ ಎಳೆ ಇಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಇದೊಂದು ಕೊಲೆಯೊಂದರ ತನಿಖೆಯ ಸುತ್ತ ಸಾಗುವ ಕಥೆಯಾಗಿದೆ. ಮೂರು ಹುಡುಗರು, ಒಬ್ಬ ಹುಡುಗಿ ಸುತ್ತ ಕಥೆ ತೆರೆದುಕೊಳ್ಳಲಿದ್ದು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆರೆಹಿಡಿಯಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಯುವ ಪ್ರತಿಭೆಗಳಾದ ಶಶಿಕಿರಣ್, ಶಿವರಾಜ್, ಲೋಹಿತ್ ಈ ಚಿತ್ರದ ಮೂವರು ನಾಯಕರಾಗಿ ನಟಿಸಿದ್ದು, ಅವರೇ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನಾಯಕಿ ಪಾತ್ರದಲ್ಲಿ ನಿಶ್ಕಲ ನಟಿಸಿದ್ದಾರೆ ಎಂದು ಹೇಳಿದರು.
ನಾಯಕ ಶಶಿಕಿರಣ್ ಮಾತನಾಡಿ, ನಾವೆಲ್ಲ ಹೊಸಬರು. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ಸಿನಿಮಾ ಕ್ಲೈಮ್ಯಾಕ್ಸ್ ಬರೋವರೆಗೂ ಕುತೂಹಲ ಕಾಯ್ದುಕೊಳ್ಳಲಿದೆ ಎನ್ನುವ ವಿಶ್ವಾಸವಿದೆ ಎಂದರು
ನಟ ಶಿವರಾಜ್ ಮಾತನಾಡಿ, ಸಮಾಜಸೇವೆ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿರ್ದೇಶಕ ಇಂದ್ರಜಿತ್ ಸ್ನೇಹಿತರು, ಎಲ್ಲರೂ ಇಷ್ಟಪಡುವಂಥ ಸಿನಿಮಾ ಮಾಡಿದ್ದೇವೆ. ಪ್ರೇಕ್ಷಕರು ಆಶೀರ್ವಾದ ಮಾಡಬೇಕು ಎಂದು ಕೋರಿದರು.
ನಟ ಲೋಹಿತ್, ಸಂಗೀತ ನಿರ್ದೇಶಕ ವೀರ ಸಮರ್ಥ ಇದ್ದರು.