ಧಾರವಾಡ: ಕೋವಿಡ್-19ರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೋವಿಶೀಲ್ಡ್ ಲಸಿಕೆ ಹಾಕುವ 2ನೇ ಹಂತದ ಕಾರ್ಯ ಫೆ. 8ರಂದು ಆರಂಭವಾಗಲಿದ್ದು, ಲಸಿಕೆಯನ್ನು ಗೃಹ ಇಲಾಖೆಯ ಪೊಲೀಸ್, ಹೋಂ ಗಾರ್ಡ್ಸ್, ಜೈಲು ಸಿಬ್ಬಂದಿ, ಕಂದಾಯ, ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿಗೆ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ಡಾ. ಬಿ. ಸುಶೀಲಾ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಆರೋಗ್ಯ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. ಈವರೆಗೆ ಆರೋಗ್ಯ ಕಾರ್ಯಕರ್ತರು, ವೈದ್ಯರು ಸೇರಿ 11,755 ಜನ ಲಸಿಕೆ ಹಾಕಿಸಿಕೊಂಡಿದ್ದಾರೆ. ಈಗಾಗಲೇ ನೋಂದಾಯಿತರಾಗಿರುವ
ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರು ತಮಗೆ ಎಸ್ಎಂಎಸ್ ಅಥವಾ ಆನ್ಲೈನ್ ಮಾಹಿತಿ ತಲುಪಿರದಿದ್ದಲ್ಲಿ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಚುಚ್ಚುಮದ್ದು ಹಾಕಿಸಿಕೊಳ್ಳಬಹುದು ಎಂದರು.
2ನೇ ಹಂತದಲ್ಲಿ ಹೋಮ್ ಗಾರ್ಡ್, ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆ, ಕಂದಾಯ ಇಲಾಖೆ, ಮಹಾನಗರ ಪಾಲಿಕೆ ಸಿಬ್ಬಂದಿ ಸೇರಿ ಒಟ್ಟು 8,770 ಜನರಿಗೆ ಜಿಲ್ಲಾ ಆಸ್ಪತ್ರೆ, ಎಲ್ಲ ತಾಲೂಕು ಆಸ್ಪತ್ರೆ, ಎಸ್ಡಿಎಂ ಆಸ್ಪತ್ರೆ, ಕಿಮ್್ಸ, ವಿವೇಕಾನಂದ ಆಸ್ಪತ್ರೆ, ಸುಚಿರಾಯು ಆಸ್ಪತ್ರೆಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಲಸಿಕೆ ನೀಡಲಾಗುತ್ತದೆ. ಲಸಿಕೆ ಬಗ್ಗೆ ಆತಂಕ, ಭಯ ಬೇಡ. ನೋಂದಾಯಿತ ಹಾಗೂ ಇಲಾಖೆಗಳಿಂದ ಕಳುಹಿಸಿರುವ ಸಿಬ್ಬಂದಿ, ಅಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲಾ ಆರ್ಸಿಎಚ್ಒ ಡಾ.ಎಸ್.ಎಂ. ಹೋನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅಯ್ಯನಗೌಡರ, ಡಾ.ಶಶಿ ಪಾಟೀಲ, ಡಾ. ಕೆ.ಎನ್. ತನುಜಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ ನಿಂಬಣ್ಣವರ, ಡಾ.ಶೋಭಾ ಮೂಲಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಶೆಟ್ಟರ್, ಇತರರು ಇದ್ದರು.