ಹಾಸನ: ಕೃಷಿ ಯಂತ್ರೋಪಕರಣಗಳ ಖರೀದಿಗೆ ರೈತರಿಗೆ ಸಹಾಯಧನ ನೀಡುವ ನೆಪದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಜಿಲ್ಲೆಯ ಎಲ್ಲ ಶಾಸಕರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅಧ್ಯಕ್ಷತೆಯಲ್ಲಿ ನಡೆದ 2022-23ನೇ ಸಾಲಿನ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸರ್ಕಾರ ರೈತರಿಗೆ ಶೇ.50 ರಷ್ಟು ಸಹಾಯಧನ ನೀಡುತ್ತಿದೆ. ಆದರೆ, ಕೃಷಿ ಇಲಾಖೆ ಸೂಚಿಸುವ ಕಂಪನಿಯ ಕೃಷಿ ಯಂತ್ರೋಪಕರಣದ ಬೆಲೆ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟಾಗಿರುತ್ತದೆ. ಅಲ್ಲದೆ ಗುಣಮಟ್ಟವೂ ಚೆನ್ನಾಗಿರುವುದಿಲ್ಲ ಎಂದು ದೂರಿದರು.
ಶೇ.50 ರಷ್ಟು ಸಹಾಯಧನ ಸಿಗುತ್ತದೆ ಎಂಬ ಆಸೆಯಿಂದ ರೈತ ಕೃಷಿ ಇಲಾಖೆಯಲ್ಲಿ ಕೃಷಿ ಯಂತ್ರೋಪಕರಣ ಖರೀದಿಸಲು ಬಂದರೆ ಮಾರುಕಟ್ಟೆಯಲ್ಲಿ ಆ ಯಂತ್ರಕ್ಕಿರುವ ಬೆಲೆಯಷ್ಟು ಹಣವನ್ನೇ ಪಾವತಿಸಬೇಕಾಗುತ್ತದೆ. ಹೆಸರಿಗೆ ಮಾತ್ರ ಸಹಾಯಧನ. ಯಂತ್ರೋಪಕರಣದ ಬೆಲೆಯನ್ನು ದುಪ್ಪಟು ನಿಗದಿಗೊಳಿಸಿ ಖಾಸಗಿ ಕಂಪನಿಗೆ ಲಾಭ ಮಾಡಿಕೊಡಲಾಗುತ್ತಿದೆ. ಅದರ ಬದಲು ರೈತರು ನೇರವಾಗಿ ಮಾರುಕಟ್ಟೆಯಲ್ಲಿಯೇ ಖರೀದಿಸಬಹುದಾಗಿದೆ ಎಂದರು.
ಇದಕ್ಕೆ ದನಿಗೂಡಿಸಿದ ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ. ಕುಮಾರಸ್ವಾಮಿ, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ, ಹೊಳೆನರಸೀಪರ ಶಾಸಕ ಎಚ್.ಡಿ. ರೇವಣ್ಣ ಮತ್ತು ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ಅವರು, ‘ಇದು ಪಾಲಿಸಿ ವಿಷಯ. ಈ ರೀತಿ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುವ ಬದಲು, ರೈತರು ನೇರವಾಗಿ ಮಾರುಕಟ್ಟೆಯಲ್ಲಿಯೇ ಅವರಿಗಿಷ್ಟವಾದ ಕಂಪನಿಯ ಗುಣಮಟ್ಟದ ಕೃಷಿ ಯಂತ್ರೋಪಕರಣ ಖರೀದಿಸಲು ಅವಕಾಶ ನೀಡಬೇಕು. ಅವರಿಂದ ಖರೀದಿ ರಸೀದಿ ಪಡೆದು ಅದರ ಅರ್ದದಷ್ಟು ಸಹಾಯಧನವನ್ನು ನೇರವಾಗಿ ಅವರ ಖಾತೆಗೆ ಹಾಕುವ ವ್ಯವಸ್ಥೆ ರೂಪಿಸಬೇಕು’ ಎಂದು ಸಚಿವರನ್ನು ಒತ್ತಾಯಿಸಿದರು.
ಹಾಸನ ಶಾಸಕ ಪ್ರೀತಂಗೌಡ ಸಹ ದನಿ ಎತ್ತಿ, ಇದು ಇಡೀ ರಾಜ್ಯದ ಸಮಸ್ಯೆ. ಹಾಗಾಗಿ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪಕ್ಷಭೇದ ಮರೆತು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದು ಈ ಕುರಿತ ನೀತಿ ಬದಲಾಯಿಸಲು ಒತ್ತಡ ಹೇರೋಣ ಎಂಬ ಸಲಹೆ ನೀಡಿದರು. ಇದಕ್ಕೆ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸಹಮತ ವ್ಯಕ್ತಪಡಿಸಿ, ಈ ಸಮಸ್ಯೆ ಕುರಿತು ನಾಳೆಯೇ ಕೃಷಿ ಸಚಿವರೊಂದಿಗೆ ಮಾತನಾಡುತ್ತೇನೆ. ಇಲಾಖೆ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಉಪ ಕಾರ್ಯದರ್ಶಿ ವಿರುದ್ಧ ವ್ಯಗ್ರರಾದ ಎಟಿಆರ್:
ಕೇಂದ್ರ ಸರ್ಕಾರದ ಗ್ರಾಮ ವಿಕಾಸ ಯೋಜನೆಗೆ ಅನುಮೋದನೆ ನೀಡಲು ಕಳೆದ ಆರು ತಿಂಗಳಿಂದ ಸತಾಯಿಸುತ್ತಿರುವ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ಬಿ.ಆರ್. ಪುನೀತ್ ವಿರುದ್ಧ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ವ್ಯಗ್ರರಾಗಿ ಏರುದನಿಯಲ್ಲಿ ಕೂಗಾಡಿದರು. ‘ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲು ನಿಮಗೇನು ಕಷ್ಟ, ನಾವು ಸುಮ್ಮನಿದ್ದೇವೆ ಎಂದು ನೀವು ಆಡಿದ್ದೇ ಆಟ ಆಗಿದೆ’ ಎಂದು ಕಿಡಿಕಾರಿದರು.
ಆರೋಗ್ಯ ಇಲಾಖೆ ಕುರಿತು ಅಸಮಾಧಾನ:
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ, ಎಷ್ಟೋ ಆಸ್ಪತ್ರೆಗಳಲ್ಲಿ ನರ್ಸಗಳೇ ಇಲ್ಲ ಎಂಬುದಾಗಿ ಎಲ್ಲ ಶಾಸಕರು ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಸಂಖ್ಯೆ ಹೇಳಲು ತಡಬಡಾಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಸ್ವಾಮಿ ಅವರನ್ನು ತರಾಟೆ ತೆಗೆದುಕೊಂಡರು. ಕೊನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಮಧ್ಯ ಪ್ರವೇಶಿಸಿ, ಆರು ಮಂದಿ ಆಯುರ್ವೇದ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಖಾಲಿ ಇರುವ ಸ್ಥಳಗಳಿಗೆ ನಿಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅತಿವೃಷ್ಟಿ ಪರಿಹಾರ ಅಷ್ಟಕ್ಕಷ್ಟೇ:
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿ ಆಗಿರುವ ಬೆಳೆಗಳಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಒಟ್ಟು 108 ಕೋಟಿ ರೂ. ಪರಿಹಾರ ಧನವನ್ನು ನೇರವಾಗಿ ಫಲಾನುಭವಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ ಮಳೆ ಆಶ್ರಿತ ಕೃಷಿ ಬೆಳೆಗಳಿಗೆ 9.94 ಕೋಟಿ ರೂ., ಮೆಣಸು ಮತ್ತಿತರ ತೋಟಗಾರಿಕೆ ಬೆಳೆಗಳ ಹಾನಿಗೆ 32 ಕೋಟಿ ರೂ. ಮತ್ತು ಕಾಫಿ ಬೆಳೆ ಹಾನಿಗೆ 66 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಗೆ ಬಿಡುಗಡೆ ಆಗಿರುವ 108 ಕೋಟಿ ರೂ. ಪರಿಹಾರದ ಹಣದಲ್ಲಿ ಸಿಂಹಪಾಲು ಕಾಫಿ ಮತ್ತು ಮೆಣಸು ಬೆಳೆಗಳಿಗೆ ಹೋಗಿದೆ. ಆದರೆ ಈ ಬಾರಿ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ತೆಂಗು ಬೆಳೆ ಹಾನಿ ಆಗಿದೆ. ಕೃಷಿ ಬೆಳೆಗಳು ನಾಶವಾಗಿವೆ. ಕೃಷಿ ಬೆಳೆಗಳಿಗೆ ನೀಡಿರುವ ಪರಿಹಾರ ಏನೇನೂ ಸಾಲದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ರೇವಣ್ಣ-ಪ್ರೀತಂ ವಾಗ್ವಾದ:
ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ರೂ. ಯೋಜನೆ ಮಂಜೂರಾಗಿತ್ತು. ಅದನ್ನು ಬದಲಿಸಲಾಗಿದೆ ಎಂದು ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಾಸನ ಶಾಸಕ ಪ್ರೀತಂಗೌಡ, ಸಂಪುಟದ ತೀರ್ಮಾನದಂತೆ ಕೆಲಸ ನಡೆಯುತ್ತಿದೆ. ನನ್ನ ಕ್ಷೇತ್ರದ ವಿಚಾರವನ್ನು ಬೇರೆಯವರು ಮಾತನಾಡುವ ಅಗತ್ಯವಿಲ್ಲ ಎಂದರು.
ಇದರಿಂದ ಸಿಟ್ಟಿಗೆದ್ದ ರೇವಣ್ಣ, ‘ಹಾಸನ ಜಿಲ್ಲಾ ಕೇಂದ್ರ, ಇದು ಎಲ್ಲರಿಗೂ ಸಂಬಂಧಿಸಿದ ವಿಷಯ. ಯಡಿಯೂರಪ್ಪ ಈ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ, ಒಂದು ಪೈಸೆ ಹಣ ಕೊಟ್ಟಿಲ್ಲ’ ಎಂದು ಕೂಗಾಡಿದರು. ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರೀತಂಗೌಡ, ‘ಏಕೆ, ಹಳೇಬೀಡು ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ಲವಾ, ನೀವು ಘೋಷಣೆ ಹೋಗಿದ್ದಿರಿ, ನಾವು ಕೆಲಸ ಮಾಡುತ್ತಿದ್ದೇವೆ. ಕೆಡಿಪಿ ಸಭೆಯಲ್ಲಿ ಯಡಿಯೂರಪ್ಪ ಹೆಸರು ಏಕೆ ತರುತ್ತೀರಾ? ರಾಜಕೀಯ ಬೇರೆ ಕಡೆ ಮಾಡೋಣ, ಇದು ಕೆಡಿಪಿ ಸಭೆ, ಅದಕ್ಕೆ ತಕ್ಕ ಹಾಗೆ ಮಾತನಾಡಿ’ ಎಂದು ತಿರುಗೇಟು ನೀಡಿದರು.
ಇಬ್ಬರು ಶಾಸಕರ ನೇರಾನೇರಾ ವಾಗ್ವಾದ ತಮ್ಮ ಎದುರೇ ನಡೆಯುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಕೆಲಕಾಲ ಮೌನಕ್ಕೆ ಶರಣಾಗಿದ್ದರು. ಕೊನೆಗೆ ಇಬ್ಬರನ್ನೂ ಸಮಾಧಾನಪಡಿಸಿ, ಸಭೆಯ ಅಜೆಂಡಾ ವಿಷಯಗಳನ್ನು ಕೈಗೆತ್ತಿಕೊಂಡರು.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಪಂ ಸಿಇಒ ಕಾಂತರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.