ಬೆಳಗಾವಿ: ಪಂಚಮಸಾಲಿ ಸಮುದಾಯದ ಬಗ್ಗೆ ಹಿಂದುಳಿದ ಅಯೋಗದಿಂದ ವರದಿ ಪಡೆದು ಕೂಡಲೇ ‘2ಎ ಮೀಸಲಾತಿ’ ಘೋಷಣೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅಖಿಲಭಾರತ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃಂತ್ಯುಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ಮಹಾಪರಿಷತ್’ದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮೀಸಲಾತಿ ನೀಡುವಂತೆ ಸಮುದಾಯದ ಶಾಸಕರು ಸರ್ಕಾರಕ್ಕೆ ಮನವಿ ಮಾಡಿದರೂ ಸರ್ಕಾರ ನಿರಾಸಕ್ತಿ ತೋರುತ್ತಿರುವುದು ಖಂಡನೀಯ. ನಾವು ಯಾರನ್ನಾದರೂ ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸುತ್ತಿಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೇಳುತ್ತಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟೆಲ್ಲ ಹೋರಾಟ, ಬೆಳವಣಿಗೆಗಳು ನಡೆಯುತ್ತಿದ್ದರೂ ಸಮುದಾಯದ ಕೂಗು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಳುತ್ತಿಲ್ಲ, ಸ್ವತಃ ಅವರೂ ಓರ್ವ ವಕೀಲರಾಗಿರುವ ಕಾರಣಕ್ಕೆ ವಕೀಲರ ಮೂಲಕವೇ ಮೀಸಲಾತಿ ಹೋರಾಟ ಆರಂಭಿಸಿದ್ದೇವೆ. ಬೆಳಗಾವಿಯಲ್ಲಿದ್ದಾಗಲೇ ಸಭೆ ಕರೆಯುತ್ತೇನೆ ಎಂದು ಹಿಂದೆಯೇ ಭರವಸೆ ಕೊಟ್ಟಿದ್ದ ಸಿದ್ದರಾಮಯ್ಯ ಈವರೆಗೂ ಸಭೆ ಕರೆಯುವ ಗೋಜಿಗೆ ಹೋಗಿಲ್ಲ. ಸರ್ಕಾರಕ್ಕೆ ಯಾವುದೇ ಗಡುವು ಕೊಡುವುದಿಲ್ಲ. ಸರ್ಕಾರವೇ ನಮಗೆ ಮಾತು ಕೊಟ್ಟಿದೆ. ಮಾತು ಉಳಿಸಿಕೊಳ್ಳಲಿ ಎಂದರು.
ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ಮತ ಹಾಕಿಲ್ಲ ಎಂದು ಸಿದ್ದರಾಮಯ್ಯ ಅವರು ತಪ್ಪು ತಿಳಿದುಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪಂಚಮಸಾಲಿ ಸಮುದಾಯ ಕೊಡುಗೆ ಹೆಚ್ಚಿದೆ ಎಂದು ಗುಡುಗಿದರು.
ಶಾಸಕ ಬಸನಗೌಡ ಪಾಟೀಲಯತ್ನಾಳ ಮಾತನಾಡಿ, ಬರುವ ಚಳಿಗಾಲದ ಅಧಿವೇಶನದೊಳಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ೋಷಿಸಬೇಕು. ಇಲ್ಲವಾದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲೂ ಮೀಸಲಾತಿಗಾಗಿ ಬಹಳಷ್ಟು ಒತ್ತಡ ಹಾಕಿದ್ದೇವೆ. ಆದರೆ, ನಮ್ಮವರೇ ನಮಗೆ ಅಡ್ಡಿ ಪಡೆಸಿದ್ದರು.
‘2ಡಿ’ ಮೀಸಲಾತಿ ೋಷಿಸಲಾಗಿತ್ತಾದರೂ ಅದು ನಮ್ಮ ಸಮುದಾಯಕ್ಕೆ ತೃಪ್ತಿ ತಂದಿಲ್ಲ. ಸಮಾಜದ ಋಣ ತೀರಿಸಲು ಪ್ರತಿಯೊಬ್ಬರೂ ಪಕ್ಷಾತೀತವಾಗಿ ಮುಂದಿನ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಅ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಮಸಾಲಿ ಸಮುದಾಯದ ವಕೀಲರ ನಿಯೋಗದ ಭೇಟಿಗೆ ಸಮಮ ನಿಗದಿಪಡಿಸಿದ್ದಾರೆೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಒಂದು ವೇಳೆ ಸ್ಪಂದಿಸದಿದ್ದರೆ ಸುವರ್ಣ ವಿಧಾನಸೌಧ ಮುತ್ತಿಗೆಗೆ ನಾನು ಬೆಂಬಲಿಸುತ್ತೆನೆ ಎಂದರು.
ಅಖಿಲಭಾರತ ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ನ್ಯಾಯಪೀಠವನ್ನು ಗಣ್ಯರು ಉದ್ಘಾಟಿಸಿದರು. ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಲ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಸಿ.ಸಿ. ಪಾಟೀಲ, ಮಾಜಿ ಸಚಿವರಾದ ಎ.ಬಿ. ಪಾಟೀಲ, ಶಶಿಕಾಂತ ನಾಯಿಕ, ಮುಖಂಡರಾದ ಎಸ್.ಎಸ್. ಕಿವಡಸನ್ನವರ, ವಿರೂಪಾಕ್ಷ ಈಟಿ, ಆರ್.ಕೆ ಪಾಟೀಲ, ನಿಂಗಪ್ಪ ಫಿರೋಜ್, ಶಿವಗೌಡ ಪಾಟೀಲ, ಎಂ.ಬಿ. ಝಿರಲಿ ಇತರರಿದ್ದರು.
ಸಿಎಂ ಸಿದ್ದರಾಮಯ್ಯಗೆ ಕರೆ: ಸಭೆಯ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ ಶಾಸಕ ವಿನಯ ಕುಲಕರ್ಣಿ, ವಕೀಲರ ನಿಯೋಗ ಭೇಟಿಗೆ ದಿನಾಂಕ ನಿಗದಿಪಡಿಸಿದರು. ಸಿದ್ಧರಾಮಯ್ಯ ಅವರೊಂದಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಮಾತನಾಡಿದರು.
ಸ್ವಾಮೀಜಿಗೆ ಮೀಸಲಾತಿ ಹೋರಾಟ ಏಕೆ ಬೇಕು? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ನಾನು ನನಗೋಸ್ಕರ ಹೋರಾಟ ಮಾಡುತ್ತಿಲ್ಲ, ಸಮುದಾಯದ ಬಡ ಮಕ್ಕಳಿಗಾಗಿ ಮೀಸಲಾತಿ ಕೇಳುತ್ತಿದ್ದೇನೆ.| ಬಸವಜಯ ಮೃತ್ಯುಂಜಯ ಸ್ವಾಮೀಜಿ