ಜಿಲ್ಲೆ

2ಎ ಮೀಸಲಾತಿ ಹೋರಾಟ, ಪೂರ್ವಭಾವಿ ಸಭೆ

ವಿಜಯಪುರ: ಲಿಂಗಾಯತ ಪಂಚಮಸಾಲಿ ಸಮಾಜದಿಂದ 2A ಮೀಸಲಾತಿಗೆ ಸಂಬಂಧಿಸಿದ ಹೋರಾಟದ ಬಗ್ಗೆ ಪೂರ್ವಭಾವಿ ಸಭೆಯನ್ನು ಇಂದು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆಸಲಾಯಿತು. ಇಲ್ಲಿನ ಯಾತ್ರಿ ನಿವಾಸದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಮತ್ತು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ ಈಗಾಗಲೇ ನಾವು ಸರ್ಕಾರಕ್ಕೆ ಎರಡು ಬಾರಿ ಗಡುವು ನೀಡಿದ್ದೇವೆ. ಆದರೂ ಸರ್ಕಾರ ನಮ್ಮ ಬೇಡಿಕೆಗೆ, ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮುಂಬರುವ ಜನವರಿ 14 ರಂದು ನಮ್ಮ ಪಾದಯಾತ್ರೆಯನ್ನು ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಿಂದ ಬೆಂಗಳೂರಿನ ವರೆಗೆ ನಡೆಸುತ್ತೇವೆ. ಸರಕಾರ ಕೇವಲ ಮೀಸಲಾತಿ ನೀಡುವ ಭರವಸೆ ನೀಡಿದರೆ ಸಾಲದು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಅದರ ಆದೇಶವನ್ನು ಹೊರಡಿಸಬೇಕು ಎಂದು ಕಾಶಪ್ಪನವರ ಆಗ್ರಹಿಸಿದ್ರು. 2ಎ ಮೀಸಲಾತಿ ಹೋರಾಟಕೋಸ್ಕರ ನನ್ನ ಜೀವ ಬೇಕಾದ್ರೂ ಕೊಡುತ್ತೇನೆ ಎಂದು ವಿಜಯಾನಂದ ಕಾಶಪ್ಪನವರ ಹೇಳಿದರು. ಇದೆ ವೇಳೆ ಮಾತನಾಡಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳು ನಮ್ಮ ಹೋರಾಟಕ್ಕೆ ಸರ್ಕಾರ ಬೆಂಬಲ ನೀಡಿದರೆ ಅಭಿನಂದನೆ ಸಲ್ಲಿಸುತ್ತೇವೆ. ಇಲ್ಲದಿದ್ದರೆ ಪಾದಯಾತ್ರೆ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದರು. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಮುಂಬರುವ ದಿನದಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದ್ರು. ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪಂಚಮಸಾಲಿ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಜೆಡಿಎಸ್ ಮುಖಂಡ ಅಪ್ಪುಗೌಡ ಮನಗೂಳಿ, ಸಮಾಜದ ತಾಲೂಕ ಅಧ್ಯಕ್ಷ ಸಂಜು ಬಿರಾದಾರ ಸೇರಿದಂತೆ ಜಿಲ್ಲೆಯ ಪಂಚಮಸಾಲಿ ಮುಖಂಡರು ಭಾಗವಹಿಸಿದ್ದರು.