ಮೈಸೂರು: ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ದಸರಾ ಗಜಪಡೆಯ ತಾಲೀಮು ಮತ್ತಷ್ಟು ಚುರುಕುಗೊಂಡಿದ್ದು, ಮಂಗಳವಾರ ಸುಗ್ರೀವ ಆನೆ ಎರಡನೇ ಬಾರಿಗೆ ಮರದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಹೆಜ್ಜೆ ಹಾಕಿತು.
ಮಧ್ಯಾಹ್ನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಸುಗ್ರೀವನಿಗೆ ಗಾದಿ ಹಾಗೂ ನಮ್ದಾ ಬಿಗಿದ ಬಳಿಕ ಅಂಬಾರಿ ಕಟ್ಟುವ ಸ್ಥಳಕ್ಕೆ ಕರೆತರಲಾಯಿತು. ಸಂಜೆ 4.10 ರಿಂದ 4.30ರವರೆಗೆ ಕ್ರೇನ್ ಮೂಲಕ ಮರದ ಅಂಬಾರಿ ಕಟ್ಟಲಾಯಿತು. ಅಂಬಾರಿ ಸೇರಿದಂತೆ 700 ಕೆ.ಜಿ. ತೂಕದ ಬಾರವನ್ನು ಹೊತ್ತು ಸುಗ್ರೀವ ತಾಲೀಮು ಆರಂಭಿಸಿತು.
ಅರಮನೆಯ ಉತ್ತರ ಭಾಗದಲ್ಲಿರುವ ಬಲರಾಮ ದ್ವಾರದ ಮೂಲಕ ಸಂಜೆ 4.46ರ ಸುಮಾರಿಗೆ ಹೊರಬಂದ ಗಜಪಡೆ ಕೆ.ಆರ್. ವೃತ್ತ, ಸಯ್ಯಜಿರಾವ್ ರಸ್ತೆ, ಹಳೇ ಆರ್‌ಎಂಸಿ ರಸ್ತೆ ಮೂಲಕ ರಾಜಬೀದಿಯಲ್ಲಿ ಸಾಗಿತು. 6.25ರ ವೇಳೆಗೆ ಬನ್ನಿಮಂಟಪ ತಲುಪಿತು.
ಅಭಿಮನ್ಯುವಿಗೆ ಜನರ ಭರ್ಜರಿ ಸ್ವಾಗತ:
ಮಂಗಳವಾರದ ತಾಲೀಮಿನಲ್ಲಿ ನಿಶಾನೆ ಆನೆ ಅಭಿಮನ್ಯು ವಿಶೇಷ ಗಮನ ಸೆಳೆದನು. ಅಂಬಾರಿ ಹೊತ್ತ ಸುಗ್ರೀವ ಮುನ್ನಡೆದರೆ, ಗಜಪಡೆಯ ಸಾಲಿನಲ್ಲಿ ಮೂರನೇ ಆನೆಯಾಗಿ ಅಭಿಮನ್ಯು ಸಾಗಿದನು. ದಸರೆಗೆ ತಡವಾಗಿ ಆಗಮಿಸಿರುವ ಅಭಿಮನ್ಯುವನ್ನು ನೋಡಲು ರಾಜಬೀದಿಯುದ್ದಕ್ಕೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆನೆಗಳ ಮೆರವಣಿಗೆಯನ್ನು ಕಣ್ತುಂಬಿಕೊಂಡ ಜನರು ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದರು.
ಸೆ.30ರಂದು ನಡೆದ ತಾಲೀಮಿನಲ್ಲಿ ಸುಗ್ರೀವ ಒಂದು ಸಾವಿರ ಕೆ.ಜಿ. ತೂಕದ ಬಾರ ಹಾಗೂ ಮರದ ಅಂಬಾರಿ ಹೊತ್ತು ಯಶಸ್ವಿಯಾಗಿ ಹೆಜ್ಜೆ ಹಾಕಿತ್ತು. ಇದೀಗ ಮತ್ತೊಮ್ಮೆ ಅಂಬಾರಿ ಹೊತ್ತು ತಾಲೀಮು ಪೂರ್ಣಗೊಳಿಸುವ ಮೂಲಕ ಜಂಬೂ ಸವಾರಿಗೆ ತನ್ನ ಸಿದ್ಧತೆಯನ್ನು ಪ್ರದರ್ಶಿಸಿದೆ.
ಮೈಸೂರಿಗೆ ಎರಡನೇ ತಂಡದಲ್ಲಿ ಆಗಮಿಸಿದ್ದ ಸುಗ್ರೀವ ಯಾವುದೇ ಆತಂಕವಿಲ್ಲದೆ ರಾಜಬೀದಿಯಲ್ಲಿ ಸಾಗಿತು. ಎರಡನೇ ಬಾರಿಯ ಅಂಬಾರಿ ತಾಲೀಮನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ ಸುಗ್ರೀವ, ಜಂಬೂ ಸವಾರಿಯಲ್ಲಿ ಅಂಬಾರಿ ಹೊರಲು ಸಮರ್ಥವಾಗಿರುವುದನ್ನು ಮತ್ತೊಮ್ಮೆ ತೋರಿಸಿತು.