ದಾಳಿಯ ವೇಲೆ ಲೋಕಾಯುಕ್ತರು ವಶಪಡಿಸಿಕೊಂಡಿರುವ ದಾಖಲೆಗಳು ಇರುವ ಬಾಕ್ಸ್​ಗಳು. 
ಜಿಲ್ಲೆ

2ನೇ ದಿನವೂ ಲೋಕಾ ಚಾಟಿ

ಕೋಲಾರ: ಸರ್ಕಾರಿ ನೌಕರರ ಸಂದ ಮಾಜಿ ಅಧ್ಯಕ್ಷ ಜಿ.ಸುರೇಶ್​ಬಾಬು ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಎರಡನೇ ದಿನವೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

5 ತಂಡದ ಲೋಕಾ ಪೊಲೀಸರು ಗುರುವಾರ ಮಧ್ಯಾಹ್ನ 3 ಗಂಟೆಗೆ ಶುರುವಾಗಿದ್ದ ದಾಳಿ, ಎರಡನೇ ದಿನ ಶುಕ್ರವಾರ ಮಧ್ಯಾಹ್ನ 3 ಗಂಟೆ ಅಂತ್ಯಗೊಂಡಿದೆ.

ತಾಲೂಕು ಕಚೇರಿ, ಭೂಮಾಪಕ ಕಚೇರಿಯಲ್ಲಿ ಪೋಡಿಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಭೂದಾಖಲೆಗಳ ಇಲಾಖೆ ಸೂಪರ್​ವೈಸರ್​ ಸುರೇಶ್​ಬಾಬು ಹಾಗೂ ಅಪ್ತರ ಮೇಲೆ ದಾಳಿ ನಡೆಸಿದ್ದರು. ಅದರಂತೆ ಗುರುವಾರ ಏಕಕಾಲದಲ್ಲಿ ಸುರೇಶ್​ಬಾಬು ನಿವಾಸ ಸೇರಿ ಐದು ಕಡೆಗಳಲ್ಲಿ ದಾಳಿ ನಡೆಸಿದ್ದರು. ಆ ವೇಳೆ 7.50 ಲಕ್ಷ ರೂ. ನಗದು ಹಾಗೂ ಹೊಸಕೋಟೆ ಬಳಿಯ ಕೆಮಿಕಲ್​ ಪ್ಯಾಕ್ಟರಿಯಲ್ಲಿ 10 ಬಾಕ್ಸ್​ಗಳಷ್ಟು ಜಮೀನು ಪೋಡಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. 2ನೇ ದಿನ ನಗರದ ಕೋಟೆ ಬಡಾವಣೆಯಲ್ಲಿರುವ ಆಪ್ತನ ಕಚೇರಿ ಹಾಗೂ ತಾಲೂಕು ಕಚೇರಿಯ ಸಹಾಯಕ ಭೂ ದಾಖಲೆಗಳ ಕಚೇರಿಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಮೀನುಗಳಿಗೆ ಸಂಬಂಧಿಸಿದ ಪೋಡಿ ದಾಖಲೆಗಳೊಂದಿಗೆ ನಕಲಿ ಸಾಗುವಳಿ ಚೀಟಿಗಳು ದೊರಕಿದ್ದು, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು ಹಾಗೂ ಮಾಲೂರು ತಹಸೀಲ್ದಾರ್​ ಹೆಸರಿನ ನಕಲಿ ಸೀಲ್​ಗಳು ದೊರಕಿವೆ ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ.

ಸುರೇಶ್​ಬಾಬು ಹಾಗೂ ಆಪ್ತರು ಜಮೀನಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು, ಸರ್ಕಾರಿ ದಾಖಲೆಗಳನ್ನು ಅನಧಿಕೃತ ಸ್ಥಳಗಳಲ್ಲಿ ಸಂಗ್ರಹಿಸುವುದು, ದಾಖಲೆಗಳನ್ನು ತಿದ್ದಿ ಜಮೀನು ಪರಬಾರೆ ಮಾಡಿರುವ ಬಗ್ಗೆ ದೂರುಗಳು ಬಂದಿದ್ದವು, ಸ್ವಯಂ ಪ್ರೇರಿತ ದೂರು ದಾಲಿಸಿಕೊಂಡ ಪೊಲೀಸರು ಲೋಕಾ ಎಸ್ಪಿ ಧನಂಜಯ್ಯ ನೇತೃತ್ವದಲ್ಲಿ ಎರಡು ದಿನ ದಾಳಿ ನಡೆಸಿದ್ದಾರೆ.

ತನಿಖೆಗೆ ಸದನದಲ್ಲಿ ಒತ್ತಾಯಿಸಿದ್ದ ಎಂಎಲ್ಸಿ: ಜಿ.ಸುರೇಶ್​ಬಾಬು ವಿರುದ್ಧ ಎಂಎಲ್ಸಿ ಅನಿಲ್​ಕುಮಾರ್​ ಅವರು ಸದನದಲ್ಲಿ ಪ್ರಸ್ತಾಪಿಸಿ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದ್ದರು. ಜಿಲ್ಲೆಯ ಎಲ್ಲ ತಾಲೂಕುಗಳ ಸರ್ವೇ ಇಲಾಖೆ ಮತ್ತು ಕಂದಾಯ ಇಲಾಖೆಗಳಲ್ಲಿ ನಕಲಿ ದಾಖಲೆಗಳ ಸೃಷ್ಟಿ ಮಾಡುವ ದಂಧೆ ನಡೆಯುತ್ತಿದ್ದು, ಸರ್ವೇಯರ್​ನಿಂದ ಮೇಲ್ವಿಚಾರಕರಾಗಿ ಮುಂಬಡ್ತಿ ಹೊಂದಿರುವ ಸುರೇಶ್​ಬಾಬು ಎಂಬುವರು ಪ್ರಕರಣಗಳಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದ್ದರು. ಗೋಮಾಳ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿ ಮಾಡಿ ಖಾತೆ ಮಾಡಿದ್ದಾರೆ. ಇದು ತನಿಖೆಯಾಗಬೇಕು ಎಂದು ಸದನದಲ್ಲಿ ಧ್ವನಿ ಎತ್ತಿದ್ದರು. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸುಮಾರು ಮಹತ್ತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕೈ ತಪ್ಪಿದ ಅಧ್ಯಕ್ಷ ಗಾದಿ: ಜಿಲ್ಲಾ ನೌಕರರ ಸಂದ ಜಿಲ್ಲಾಧ್ಯಕ್ಷರಾಗಿ ಮುಂದುವರೆಯಲು ಸುರೇಶ್​ಬಾಬು ನಾನ ಕಸರತ್ತು ನಡೆಸಿದ್ದರು. ಈ ಚುನಾವಣೆಯನ್ನು ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​, ಶಾಸಕ ಕೊತ್ತೂರು ಜಿ.ಮಂಜುನಾಥ್​ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಆದ ಕಾರಣ ರಾಜಕೀಯ ಬಲ ದೊರೆಯದ ಕಾರಣ ಚುನಾವಣೆಯಲ್ಲಿ ಅಜಯ್​ಕುಮಾರ್​ ವಿರುದ್ಧ ಸುರೇಶ್​ಬಾಬು ಸೋಲು ಅನುಭವಿಸಿದರು. ಚುನಾವಣೆಯ ನಂತರ ಸುರೇಶ್​ ಕುಮಾರ್​ ವಿರುದ್ಧ ಸದನದಲ್ಲಿ ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಧ್ವನಿ ಎತ್ತಿದ್ದು, ದಾಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ.