ಜಿಲ್ಲೆ

29ರಿಂದ ಅಹೋರಾತ್ರಿ ಸತ್ಯಾಗ್ರಹ

Shivamogga

ಸೊರಬ: ಸರ್ಕಾರದ ದ್ವಂದ್ವ ನೀತಿ ಖಂಡಿಸಿ ಸೆ.29ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಲು ಹಾಗೂ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದ್ದು, ಪ್ರಗತಿಪರ ಸಂಘಟನೆಗಳು ರೈತ ಸಂಘದ ಜತೆ ಕೈಜೋಡಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ಮನವಿ ಮಾಡಿದ್ದಾರೆ.

ಶನಿವಾರ ಪಟ್ಟಣ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಸಂದರ್ಭದಲ್ಲಿ ರೈತ ಸಂಘ ಹಾಗು ಜನ ಬೀದಿಗಿಳಿದು ಹೋರಾಟ ಮಾಡುವುದಿಲ್ಲವೆಂದು ಭಾವಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನಬದ್ಧ ಹಕ್ಕುಗಳನ್ನು ಮೊಟಕುಗೊಳಿಸಲು ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿರುವುದು ಖಂಡನೀಯ ಎಂದು ಟೀಕಿಸಿದರು.

ಕರೊನಾದಿಂಸ ಅಪಾರ ಪ್ರಮಾಣದ ಸಾವು ಸಂಭವಿಸಿದೆ. ಗಡಿಯಲ್ಲಿ ಸೈನಿಕರ ಮೇಲೆ ದಾಳಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಸರ್ಕಾರಗಳು ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ , ಭೂ ಸ್ವಾಧೀನ ಕಾಯ್ದೆ , ಕಾರ್ವಿುಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಕರೊನಾ ಕಾರಣಕ್ಕೆ ಅಘೊಷಿತ ತುರ್ತು ಪರಿಸ್ಥಿತಿ ಹೇರಿ ಜನಸಾಮಾನ್ಯರಲ್ಲಿ ಸಂಕಷ್ಟ ಹಾಗೂ ಭೀತಿಯ ವಾತಾವರಣ ಸೃಷ್ಟಿ ಮಾಡಿದ್ದು, ಇದು ಪ್ರಜಾಪ್ರಭುತ್ವದ ವಿರೋ ನೀತಿಯಾಗಿದೆ ಎಂದು ವಾಗ್ದಾಳಿ ಮಾಡಿದರು.

ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಸರ್ಕಾರದ ಅಸಂವಿಧಾನಿಕ ನೀತಿ ಖಂಡಿಸಿ ರೈತರು ಹಾಗೂ ಜನಮಾನ್ಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಸಹ ಕಾರ್ಯದರ್ಶಿ ಮೇಘರಾಜ್, ಮಂಜಪ್ಪ ಆರೇಕೊಪ್ಪ, ಬಾಷಾಸಾಬ್ ಇತರರಿದ್ದರು.