ಜಿಲ್ಲೆ

29ರಂದು ಕೆಎಸ್‌ನ ಒಂದು ನೆನಪು

ಕಿಕ್ಕೇರಿ: ಮೈಸೂರು ಮಲ್ಲಿಗೆ ಖ್ಯಾತಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಕಿಕ್ಕೇರಿಯ ಸುಪುತ್ರ ಎಂಬುದು ನಮ್ಮ ಸೌಭಾಗ್ಯ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್‌ನ ಟ್ರಸ್ಟಿ ಸುರೇಶ್ ತಿಳಿಸಿದರು.

ಇಲ್ಲಿನ ಕೆಪಿಎಸ್ ಶಾಲೆ ಕಚೇರಿಯಲ್ಲಿ ಇತ್ತೀಚೆಗೆ ಕೆ.ಎಸ್.ನರಸಿಂಹಸ್ವಾಮಿ ಒಂದು ನೆನಪು, ಉಪನ್ಯಾಸ, ಗೀತಗಾಯನ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, 29ರಂದು ಕಿಕ್ಕೇರಿ ಕೆಪಿಎಸ್ ಶಾಲಾ ಆವರಣದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಮೈಸೂರು ಆಕಾಶವಾಣಿ ಕೇಂದ್ರ, ಮಂಡ್ಯ ಕರ್ನಾಟಕ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. ಮಲ್ಲಿಗೆ ಕವಿಯ ಪರಿಚಯ ಹಿರಿಯರಲ್ಲಿ ಮಾತ್ರವಿದ್ದು, ಯುವಕರು, ಶಾಲಾ ಕಾಲೇಜು ಮಕ್ಕಳ ಮನದಲ್ಲಿ ಶಾಶ್ವತವಾಗಿ ಉಳಿಯಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಪ್ರಸ್ತುತ ಮಕ್ಕಳಲ್ಲಿ ಮೊಬೈಲ್, ಟಿವಿ ಬಿಟ್ಟರೆ ಶ್ರೇಷ್ಠ ಸಾಹಿತಿಗಳು, ಕವಿಗಳು, ಇತಿಹಾಸದ ಪರಿಚಯ ಮಾಯವಾಗುತ್ತಿದೆ. ಇದು ಬಹಳ ಅಪಾಯಕರವಾಗಿದೆ. ಭವಿಷ್ಯದ ಮಕ್ಕಳಲ್ಲಿ ಮೊದಲು ಸ್ಥಳೀಯ ಇತಿಹಾಸ, ಮಹನೀಯರ ಪರಿಚಯವಾಗುವ ದಿಸೆಯಲ್ಲಿ ಈ ವಿನೂತನ ಕಾರ್ಯಕ್ರಮ ಇದೆ. ಮಕ್ಕಳಲ್ಲಿ ಕವಿ, ಕವಿತೆ, ಸಂಗೀತದ ಅಭಿರುಚಿ ಮೂಡಿಸಲು ಕೆಎಸ್‌ನ ಕುರಿತು ಪ್ರಬಂಧ ಸ್ಪರ್ಧೆ, ವಿವಿಧ ಶಾಲಾ, ಕಾಲೇಜು ಮಕ್ಕಳಿಂದಲೇ ಕೆಎಸ್‌ನ ಗೀತ ಗಾಯನ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಶಾಸಕ ಎಚ್.ಟಿ.ಮಂಜು ಕಾರ್ಯಕ್ರಮ ಉದ್ಘಾಟಿಸುವರು. ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಟ್ರಸ್ಟಿ ಸುರೇಶ್, ಸಾಹಿತಿ ಡಾ.ಎಸ್.ಬಿ.ಶಂಕರೇಗೌಡ, ಪಾಂಡವಪುರ ಉಪವಿಭಾಗಾಧಿಕಾರಿ ಆರ್.ಶ್ರೀನಿವಾಸ, ಆಕಾಶವಾಣಿ ಸಹಾಯಕ ನಿರ್ದೇಶಕ ಟಿ.ಬಿ. ವಿದ್ಯಾಶಂಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಪ್ರೊ.ಜಯಪ್ರಕಾಶಗೌಡ, ತಹಸೀಲ್ದಾರ್ ಯು. ಎಸ್.ಅಶೋಕ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ, ಗ್ರಾಪಂ ಅಧ್ಯಕ್ಷ ಕೆ.ಬಿ. ಚಂದ್ರಶೇಖರ್, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಪ್ರಾಂಶುಪಾಲ ಸಹದೇವ, ಉಪಪ್ರಾಂಶುಪಾಲ ಚಲುವನಾರಾಯಣ ಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಟ್ರಸ್ಟ್ ನಿರ್ದೇಶಕರು ಮತ್ತಿತರರು ಭಾಗವಹಿಸಲಿದ್ದಾರೆ.

ಕಲಾವಿದರಾದ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಡಾ.ಅಪ್ಪಗೆರೆ ತಿಮ್ಮರಾಜು, ನಗರ ಶ್ರೀನಿವಾಸ ಉಡುಪ, ಡಾ.ಎಂ.ಡಿ.ಶ್ರೀನಿವಾಸನ್, ಹಂಸಿನಿ, ಅಮೂಲ್ಯ, ಶ್ರೀಧರ್, ಡೇವಿಡ್ ಅವರಿಂದ ಗೀತಗಾಯನವಿದೆ ಎಂದರು.

ಸಭೆಯಲ್ಲಿ ಪ್ರಾಂಶುಪಾಲ ಸಹದೇವ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ, ಮುಖ್ಯಶಿಕ್ಷಕಿ ಮಮತಾ, ಭಾರತೀ, ಮುಖಂಡರಾದ ಲಕ್ಷ್ಮೀಪುರ ಚಂದ್ರೇಗೌಡ, ಚಂದ್ರಮೋಹನ್, ಕೆ.ಎನ್.ಪುಟ್ಟೇಗೌಡ, ಮಹದೇವು, ದಯಾನಂದ್, ನಾಗರಾಜು, ಗಾಯಕ ನಗರ ಶ್ರೀನಿವಾಸ ಉಡುಪ ಹಾಜರಿದ್ದರು.