ಸುದ್ದಿಗೋಷ್ಠಿಯಲ್ಲಿ ಬಿ.ಅಮೃತ್‌ರಾಜ್ ಮಾತನಾಡಿದರು. ಎಸ್.ಕೆ.ಸತೀಶ್, ರವೀಂದ್ರ, ಮತ್ತು ನಾಗೇಶ್ ಇದ್ದರು. 
ಜಿಲ್ಲೆ

29ರಂದು ಅರ್ಜಿ ಸ್ವೀಕಾರ ಕಾರ್ಯಕ್ರಮ

ಕುಶಾಲನಗರ: ಕಾರ್ಮಿಕ ಕಾಯ್ದೆ 1961 ರಂತೆ ಎಲ್ಲ ರೀತಿಯ ವ್ಯಾಪಾರಸ್ಥರು ಕಾರ್ಮಿಕ ಕಾಯ್ದೆ ಪ್ರಕಾರ ನೋಂದಣಿ ಮಾಡಿಸಿಕೊಂಡು ಲೈಸನ್ಸ್ ಪಡೆಯಬೇಕು ಎಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅಮೃತ್‌ರಾಜ್ ತಿಳಿಸಿದರು.

ಪ್ರತಿ 5 ವರ್ಷಕ್ಕೊಮ್ಮೆ ಪರವಾನಗಿ ನವೀಕರಣವಾಗಬೇಕು. ಇತ್ತೀಚಿನ ದಿನಗಳಲ್ಲಿ ವರ್ತಕರು ಪರವಾನಗಿ ಪಡೆಯುತ್ತಿಲ್ಲ. ದಾಳಿ ನಡೆದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತಿರುವುದನ್ನು ಗಮನಿಸಿ ಇಲಾಖೆಯೊಂದಿಗೆ ಸಮನ್ವಯತೆ ಕಾಪಾಡಿಕೊಂಡು ವರ್ತಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜು.29ರಂದು ಬೈಪಾಸ್ ರಸ್ತೆಯ ವಾಸವಿ ಮಹಲ್‌ನಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಮಿಕ ಇಲಾಖೆ ವತಿಯಿಂದ ಅರ್ಜಿ ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವರ್ತಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ವರ್ತಕರು ಅರ್ಜಿಗಳನ್ನು ಬೈಪಾಸ್ ರಸ್ತೆಯ ಪೂರ್ಣಶ್ರೀ ಫರ್ನೀಚರ್ಸ್, ಐಬಿ ರಸ್ತೆಯ ಓಡಿಸ್ಸಿ ಕಲರ್ ಲ್ಯಾಬ್ ಮತ್ತು ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಕಾರ್ಯದರ್ಶಿ ರವೀಂದ್ರ.ವಿ.ರೈ ತಿಳಿಸಿದರು.

ಜಿಲ್ಲಾ ಸಮಿತಿ ನಿರ್ದೇಶಕ ಎಸ್.ಕೆ.ಸತೀಶ್ ಮಾತನಾಡಿ, ಜು.30 ರಂದು ಮಧ್ಯಾಹ್ನ 3.30 ಗಂಟೆಗೆ ಬೈಪಾಸ್ ರಸ್ತೆಯ ವಾಸವಿ ಮಹಲ್ನಲ್ಲಿ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್‌ನ ವಾರ್ಷಿಕ ಮಹಾಸಭೆ ಆಯೋಜಿಸಲಾಗಿದೆ. ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಖಜಾಂಚಿ ಎನ್.ವಿ.ಬಾಬು, ಸಹ ಕಾರ್ಯದರ್ಶಿ ಕೆ.ಎಸ್.ನಾಗೇಶ್ ಸುದ್ದಿಗೋಷ್ಠಿಯಲ್ಲಿದ್ದರು.