ಜಿಲ್ಲೆ

29ನೇ ಅಖಿಲ ಭಾರತ ಮಾಧ್ವ ತತ್ತ್ವಜ್ಞಾನ ಸಮ್ಮೇಳನ 17ರಿಂದ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಅಖಿಲ ಭಾರತ ಮಾಧ್ವ ಮಹಾಮಂಡಳ ವತಿಯಿಂದ 29ನೇ ಅಖಿಲ ಭಾರತ ಮಾಧ್ವ ತತ್ತ್ವಜ್ಞಾನ ಸಮ್ಮೇಳನವನ್ನು ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್​ನಲ್ಲಿ ಸೆ. 17ಮತ್ತು 18ರಂದು ಆಯೋಜಿಸಲಾಗಿದೆ ಎಂದು ಸಮ್ಮೇಳನ ಕಾರ್ಯಕಾರಿ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8ಕ್ಕೆ ಭಜನೆ, ನಂತರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ‘ಸೇವಾಹಿ ಪರಮೋಧರ್ಮಃ’ ವಿಷಯ ಕುರಿತು ಉಪನ್ಯಾಸ ನೀಡುವರು. ನಂತರ ಸಮ್ಮೇಳನದ ಉದ್ಘಾಟನೆ ಜರುಗಲಿದ್ದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಾಧೀಶ ಶ್ರೀ ಸುಬುಧೇಂದ್ರ ತೀರ್ಥರು, ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರು, ಶ್ರೀಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಶ್ರೀಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ದಿವ್ಯೋಪಸ್ಥಿತಿ ವಹಿಸುವರು. ಎ. ಹರಿದಾಸ ಭಟ್ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ‘ಶ್ರೀಮದನುವ್ಯಾಖ್ಯಾನ-ಶ್ರೀಮನ್ನ್ಯಾಯಸುಧಾಮಂಗಳ ಮಹೋತ್ಸವದ ನೇತೃತ್ವ ವಹಿಸುವರು ಎಂದರು.

ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಉಪಸ್ಥಿತಿಯಲ್ಲಿ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಡಾ. ಎನ್. ವಾದಿರಾಜಾಚಾರ್ಯ, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ವಿದ್ವಾನ್ ಬ್ರಹ್ಮಣ್ಯಾಚಾರ್ಯ ಉಪನ್ಯಾಸ ನೀಡುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಎಂಎಲ್​ಸಿ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ, ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಹೇಳಿದರು.

ಸೆ. 18ರಂದು ಬೆಳಗ್ಗೆ 9 ರಿಂದ ವಿವಿಧ ಗೋಷ್ಠಿಗಳು ನಡೆಯಲಿವೆ. ಸಂಜೆ 5ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸೋಸಲೆ ವ್ಯಾಸರಾಜಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಕಣ್ವಮಠದ ಶ್ರೀ ವಿದ್ಯಾಕಣ್ವ ವಿರಾಜತೀರ್ಥರು ದಿವ್ಯೋಪಸ್ಥಿತಿ ವಹಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ, ಕೇಂದ್ರೀಯ ಸಂಸ್ಕೃತ ವಿವಿಯ ಉಪ ಕುಲಪತಿ ಡಾ. ಶ್ರೀನಿವಾಸಾಚಾರ್ಯ ವರಖೇಡಿ, ಚಕ್ರವರ್ತಿ ಸೂಲಿಬೆಲೆ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ನಾಯಕ, ಪ್ರಧಾನ ಸಂಚಾಲಕ ಸಿ.ಎಚ್. ಬದ್ರಿನಾಥ ಆಚಾರ್ಯ, ಉಪಾಧ್ಯಕ್ಷ ಎ.ಸಿ.ಗೋಪಾಲ, ಸಂಚಾಲಕರಾದ ಸತ್ಯಮೂರ್ತಿ ಆಚಾರ್ಯ, ಕೃಷ್ಣರಾಜ ಕೆಮ್ತೂರ, ಕಾರ್ಯದರ್ಶಿ ಅನಂತರಾಜ ಭಟ್ ಸುದ್ದಿಗೋಷ್ಠಿಯಲ್ಲಿದ್ದರು.