ಚಾಮರಾಜನಗರ : ಸುತ್ತೂರಿನ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 110ನೇ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀಶಿವರಾತ್ರಿ ರಾಜೇಂದ್ರ ಕಲಾ ಬಳಗದಿಂದ ಆ.29 ರಂದು ಹೊಂಡರಬಾಳು ದಿ.ಶ್ರೀಲಿಂಗರಾಜೇ ಅರಸ್ ವಿರಚಿತ ಪ್ರಭಲಿಂಗಲೀಲೆ ಅಥವಾ ಅಲ್ಲಮ ಶರಣರ ಸಂದರ್ಶನ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಹದೇವನಗರ ಜೆಎಸ್‌ಎಸ್ ಪ್ರೌಢಶಾಲೆ ಶಿಕ್ಷಕ ಕಲ್ಮಳ್ಳಿ ನಟರಾಜು ತಿಳಿಸಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ರಾತ್ರಿ 9 ಗಂಟೆಗೆ ಪ್ರಾರಂಭವಾಗುವ ನಾಟಕವನ್ನು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಕಿರಿಯ ಶ್ರೀಗಳಾದ ಜಯರಾಜೇಂದ್ರ ಹಾಗೂ ಇನ್ನಿತರರು ಮಠಾಧೀಶರು ಉಪಸ್ಥಿತರಿರುವರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಶರಣ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸುತ್ತೂರು ಮಠ ಶಿಕ್ಷಣ, ದಾಸೋಹ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಪ್ರಸ್ತುತ ರಂಗಭೂಮಿ ಮತ್ತು ಜಾನಪದ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ನಾಟಕಕ್ಕೆ ಪ್ರವೇಶ ಉಚಿತವಿದೆ ಎಂದರು. ಗೋಷ್ಠಿಯಲ್ಲಿ ಹಿರಿಯ ರಂಗಕರ್ಮಿ ಎನ್.ಆರ್.ಪುರುಷೋತ್ತಮ್, ಶಿಕ್ಷಕ ಶಿವಕುಮಾರ್, ನಂಜೇದೇವನಪುರ ಗ್ರಾ.ಪಂ ಅಧ್ಯಕ್ಷ ಪಿ.ಶೇಖರಪ್ಪ, ಶಿವಕುಮಾರ್, ಎಸ್.ಉಮೇಶ್ ಇದ್ದರು.
ನಾವು ಕಲ್ಯಾಣದ ಶರಣರನ್ನು ನೋಡಿಲ್ಲ, ಈ ಮೂಲಕ ಶರಣರನ್ನು ನೋಡುವ ಭಾಗ್ಯ ದೊರೆಯುತ್ತದೆ. ನಾಡಿನ ಎಲ್ಲ ಸಮುದಾಯದವರು ಭಾಗವಹಿಸಬೇಕು. ಈ ಮೂಲಕ ಶರಣರ ಕೃಪೆಗೆ ಪಾತ್ರರಾಗಬೇಕು. ನಂದೀಶ್ ಮೂಡ್ಲುಪುರ ಜಿಲ್ಲಾಧ್ಯಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಚಾಮರಾಜನಗರ