ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ 
ಜಿಲ್ಲೆ

ಸಾಫ್ಟ್‌ವೇರ್ ಇಂಜಿನಿಯರ್‌ಗೆ 29 ಲಕ್ಷ ರೂ. ವಂಚನೆ

ನವೀನ ಬಿ.ಎಂ

ಶಿವಮೊಗ್ಗ: ಆನ್‌ಲೈನ್ ಮೂಲಕ ಪಾರ್ಟ್ ಟೈಮ್ ಉದ್ಯೋಗ ಹುಡುಕುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಬರೋಬ್ಬರಿ 29 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಿಡಿಯೋ ಲೈಕ್ ಮತ್ತು ಷೇರ್ ಮಾಡಿ ಹಣ ಗಳಿಸುವಂತೆ ನಂಬಿಸಿ ಬಳಿಕ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ.

ಜಿಲ್ಲೆಯ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಪಾರ್ಟ್‌ಟೈಮ್ ಉದ್ಯೋಗಕ್ಕಾಗಿ ಕಳೆದ ಜುಲೈ ಕೊನೆಯಲ್ಲಿ ಆನ್‌ಲೈನ್ ಮೂಲಕ ಹುಡುಕಾಟ ನಡೆಸಿದ್ದರು. ಅವರ ವಾಟ್ಸ್‌ಆ್ಯಪ್‌ಗೆ ಅನಾಮಧೇಯ ವ್ಯಕ್ತಿಯೊಬ್ಬ ಮೆಸೇಜ್ ಮಾಡಿ ಅಮೇಜಾನ್ ಆನ್‌ಲೈನ್ ಪಾರ್ಟ್‌ಟೈಮ್ ಪೊಸಿಷನಿಂಗ್ ಜಾಬ್‌ನ ಕಾರ್ಟ್‌ಗೆ ಸೇರಿಕೊಂಡು ಹಣ ಗಳಿಸಬಹುದೆಂಬ ಲಿಂಕ್ ಕಳುಹಿಸಿದ್ದ. ಆ ಲಿಂಕ್ ಕ್ಲಿಕ್ ಮಾಡಿದಾಗ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಟೆಲಿಗ್ರಾಂ ಆಪ್‌ನಲ್ಲಿ ಕೃತ್ತಿಕಾ ಗುಪ್ತಾ ಹೆಸರಿನ ಅಕೌಂಟ್ ತೆರೆದುಕೊಂಡಿತ್ತು. ಅದರಿಂದ ಯುಟ್ಯೂಬ್ ಲಿಂಕ್ ಕಳುಹಿಸಿ ಲೈಕ್ ಮತ್ತು ಷೇರ್ ಮಾಡುವಂತೆ ಸೂಚಿಸಿದ್ದರು. ಟಾಸ್ಕ್ ಪೂರೈಸಿದ್ದಕ್ಕೆ 300 ರೂ. ಹಣ ವರ್ಗಾಯಿಸಿದ್ದರು.
ಜು.30ರಂದು ಪುನಃ ಮೆಸೇಜ್ ಮಾಡಿದ ಅಪರಿಚಿತ ವ್ಯಕ್ತಿ ಪ್ರೀಪೇಡ್ ಟಾಸ್ಕ್ ಆರಂಭಿಸುವುದಾಗಿ ತಿಳಿಸಿದ್ದರು. 1000 ರೂ. ವರ್ಗಾಯಿಸಿ ಟಾಸ್ಕ್ ಪೂರೈಸಿದ್ದಕ್ಕೆ 1,300 ರೂ. ಹಿಂತಿರುಗಿಸಿದ್ದರು. ಬಳಿಕ 5000 ರೂ. ಹಾಕುವಂತೆ ತಿಳಿಸಿ 5000 ರೂ. ಮರಳಿಸಿದ್ದರು. ಅದೇ ರೀತಿ 37 ಸಾವಿರ ರೂ. ಹಾಕುವಂತೆ ತಿಳಿಸಿದ್ದು 59,800 ರೂ. ಹಣ ಹಿಂತಿರುಗಿಸಿದ್ದರು. ಹೆಚ್ಚಿಗೆ ಹಣ ಮರಳಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ನಂಬಿಕೆ ಮೂಡಿಸಿ ಜು.31ರಿಂದ ಆ.12ರವರೆಗೆ ವಿವಿಧ ಹಂತದಲ್ಲಿ 29,44,370 ರೂ. ವರ್ಗಾಯಿಸಿಕೊಂಡಿದ್ದಾರೆ. ಆದರೆ ಹಣ ಹಿಂತಿರುಗಿಸಿಲ್ಲ. ವಂಚನೆಗೊಳಗಾಗಿರುವುದು ಗೊತ್ತಾದ ಕೂಡಲೆ ಸಾಫ್ಟ್‌ವೇರ್ ಇಂಜಿನಿಯರ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.