ಜಿಲ್ಲೆ

ಸಮರ್ಪಣ ಸಹಕಾರಿಗೆ 29.97 ಲಕ್ಷ ರೂ. ಲಾಭ

ಶಿರಸಿ: ನಗರದ ಸಮರ್ಪಣ ವಿವಿಧೋದ್ಧೇಶಗಳ ಸೇವಾ ಸಹಕಾರಿ ಸಂಘ ಕಳೆದ ಆರ್ಥಿಕ ವರ್ಷದಲ್ಲಿ 29.97 ಲಕ್ಷ ರೂ. ಲಾಭ ಗಳಿಸಿದೆ.

ನಗರದ ರಾಘವೇಂದ್ರ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಎಸ್. ಎಸ್. ಹೆಗಡೆ ಹೆಗಡೆಕಟ್ಟಾ, ಸಂಘದ ಧಕ್ಷ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸದಸ್ಯರ ಪ್ರಾಮಾಣಿಕ ವ್ಯವಹಾರದಿಂದ ಇದು ಸಾಧ್ಯವಾಗಿದೆ. ಕಳೆದ 23 ವರ್ಷಗಳಿಂದ ಸಾಲ ವಸೂಲಿಗಾಗಿ ಒಮ್ಮೆಯೂ ಕೋರ್ಟ್ ಮೆಟ್ಟಿಲೇರಿಲ್ಲ. ಸಂಘದ ವಿಶ್ವಾಸಾರ್ಹತೆಯ ಕಾರಣದಿಂದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಘವು ಸ್ವಂತ ಜಾಗವನ್ನು ಖರೀದಿಸಿದ್ದು ಮುಂಬರುವ ದಿನಗಳಲ್ಲಿ ನಮ್ಮದೇ ಕಟ್ಟಡಕ್ಕೆ ಪ್ರವೇಶಿಸುತ್ತೇವೆ ಎಂದರು.
ಮುಖ್ಯ ಕಾರ್ಯನಿರ್ವಾಹಕ ಆರ್. ಎಸ್. ಹೆಗಡೆಯವರು ವಾರ್ಷಿಕ ವರದಿವಾಚಿಸಿದರು. ಆಡಳಿತ ಮಂಡಳಿಯ ಡಾ. ಪಿ ಎಸ್ ಹೆಗಡೆ, ಎಂ. ಎಂ. ಭಟ್, ಶಿವಾನಂದ ಭಟ್ ಮಾತನಾಡಿದರು.

ಅತ್ಯುತ್ತಮ ವ್ಯವಹಾರ ನಡೆಸಿದ 19 ಸದಸ್ಯರನ್ನು ಸನ್ಮಾನಿಸಲಾಯಿತು. ಪ್ರಥಮ ಪ್ರಯತ್ನದಲ್ಲೇ ಸಿಎ ಪರೀಕ್ಷೆ ಪಾಸು ಮಾಡಿದ್ದಕ್ಕಾಗಿ ಸಂತೋಷ ರಾಮಚಂದ್ರ ಹೆಗಡೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿರ್ದೇಶಕ ಜಿ. ಆರ್. ಹೆಗಡೆ ಬೆಳ್ಳೆಕೇರಿ ಸ್ವಾಗತಿಸಿದರು. ನಿರ್ದೇಶಕ ವೆಂಕಟೇಶ ಭಟ್ ವಂದಿಸಿದರು. ಸನ್ಮಾನ ಕಾರ್ಯಕ್ರಮವನ್ನು ರಮಾನಂದ ಐನಕೈ ನಿರ್ವಹಿಸಿದರು.