ಜಿಲ್ಲೆ

29, 30ರಂದು ರಾಯಚೂರಿನಲ್ಲಿ ವೈಜ್ಞಾನಿಕ ಸಮ್ಮೇಳನ

ಹಾಸನ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಡಿಸೆಂಬರ್ 29 ಮತ್ತು 30ರಂದು ರಾಯಚೂರು ಜಿಲ್ಲೆ ಲಿಂಗಸೂರಿನ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು 3ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಸಚಿವ ಸತೀಶ ಜಾರಕಿಹೊಳಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಸಮ್ಮೇಳನದಲ್ಲಿ ಕಲ್ಯಾಣ ಸಿರಿ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು, ಈ ಸಂಚಿಕೆಯಲ್ಲಿ ಜಾಹೀರಾತು, ಶುಭಾಶಯಗಳನ್ನು ಪ್ರಕಟಿಸಲು ತೀರ್ಮಾನಿಸಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಐತಿಹಾಸಿಕ ಈ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವೈಜ್ಞಾನಿಕ ಮನಸ್ಸುಗಳು ಭಾಗಿಯಾಗಲಿವೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಅಡಿಯಲ್ಲಿ ಕೃಷಿ ಅಭಿವೃದ್ಧಿ ವಿಜ್ಞಾನ ಅಭ್ಯಾಸ, ಕನ್ನಡ ಸಂಸ್ಕೃತಿ, ಕ್ರೀಡೆ, ಕಲೆ, ಸಹಕಾರ, ಯುವಕರ ತರಬೇತಿ ಮತ್ತು ಕೌಶಲ, ನಂಬಿಕೆ, ವಿಜ್ಞಾನ, ಆರೋಗ್ಯ, ವಿನೋದ, ಸಂಸ್ಕೃತ, ದೇಶಭಕ್ತಿ ಮುಂತಾದವುಗಳನ್ನು ಬೆಳೆಸುವುದು ಹಾಗೂ ವಿಜ್ಞಾನ, ವೈಜ್ಞಾನಿಕ ಮನೋಧರ್ಮ ಔಪಚಾರಿಕ ಹಾಗೂ ಅನೌಪಚಾರಿಕ ವೈಜ್ಞಾನಿಕ ಶಿಕ್ಷಣ, ವಿಜ್ಞಾನ ಕೇಂದ್ರಗಳ ಸ್ಥಾಪನೆ, ವಿಜ್ಞಾನ ಬರಹಗಾರರು, ವಿಜ್ಞಾನಿಗಳು, ವಿಜ್ಞಾನ ಶಿಕ್ಷಕರು, ಕೈಗಾರಿಕೋದ್ಯಮಿಗಳು, ಪ್ರಕಾಶಕರು ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವುದರಲ್ಲಿ ಆಸಕ್ತರಾಗಿರುವವರ ನಡುವೆ ಪರಸ್ಪರ ಸಂಪರ್ಕ ಬೆಳೆಯುವಂತೆ ಪ್ರೋತ್ಸಾಹ ನೀಡುವುದಾಗಿ ಎಂದು ಮಾಹಿತಿ ನೀಡಿದರು.
ಪ್ರಸ್ತುತ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ವಿಜ್ಞಾನ ಸಂವಹನ ಅಥವಾ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೃಜನಾತ್ಮಕ ಚಟುವಟಿಕೆ ಹಾಗೂ ಸಂಶೋಧನೆಗಳಗಾಗಿ ಅಧ್ಯಯನ, ಅಧ್ಯಾಪನಾ ಹಾಗೂ ಸಂಶೋಧನಾ ಸಂಸ್ಥೆಯೊಂದನ್ನು ಆರಂಭಿಸುವುದು. ಅದರಂತೆ ಪ್ರಸ್ತುತ ಸಂಸ್ಥೆಯಿಂದ ಸರ್ಟಿಫೈಡ್ ಕೋರ್ಸ್, ಡಿಪ್ಲೊಮಾ, ಪದವಿ ಹಾಗೂ ಪರಿಷತ್ತಿನ ವತಿಯಿಂದ ತಾಲೂಕು, ಜಿಲ್ಲಾ, ರಾಜ್ಯ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳು, ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನಾ ಗೋಷ್ಠಿಗಳನ್ನು ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್, ರಾಜ್ಯ ಘಟಕದ ಉಪಾಧ್ಯಕ್ಷೆ ಸೌಮ್ಯಮಣಿ, ಜಿಲ್ಲಾ ಗೌರವಾಧ್ಯಕ್ಷ ಬೀರೇಗೌಡ, ಜಿಲ್ಲಾ ಕಾರ್ಯದರ್ಶಿ ಕುಮಾರ್, ನಿರ್ದೇಶಕ ಜಿ.ಓ. ಮಹಾಂತಪ್ಪ ಇತರರು ಉಪಸ್ಥಿತರಿದ್ದರು.