ಮೈಸೂರು: ಸಾಂಪ್ರದಾಯಿಕವಾಗಿ ಮುಕ್ತಾಯಗೊಂಡ ನಾಡಹಬ್ಬ ದಸರೆಗೆ ಈ ಬಾರಿ 29.25 ಕೋಟಿ ರೂ. ವೆಚ್ಚವಾಗಿದೆ.
ಬರ ಹಿನ್ನೆಲೆಯಲ್ಲಿ ಸರಳವೂ ಅಲ್ಲದ, ಅದ್ದೂರಿಯೂ ಅಲ್ಲದ, ಸಾಂಪ್ರದಾಯಿಕ ದಸರೆ ಆಚರಣೆಗೆ ಮುಂದಾಗಿದ್ದ ರಾಜ್ಯ ಸರ್ಕಾರ ನಾಡಹಬ್ಬಕ್ಕಾಗಿ ಬಿಡುಗಡೆ ಮಾಡಿದ್ದ ಅನುದಾನ ಸೇರಿದಂತೆ ಪ್ರಾಯೋಜಕರಿಂದ ಪಡೆದ ಹಣವೂ ಸೇರಿ 29,25,22,049 ರೂ. ವೆಚ್ಚವಾಗಿದೆ. ಇದು ಕಳೆದ ವರ್ಷದಷ್ಟೇ ವೆಚ್ಚವಾಗಿದೆ ಎಂದು ದಸರಾ ವಿಶೇಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಶನಿವಾರ ಸುದ್ದಿಗೋಷ್ಠಿಯಲ್ಲಿ ದಸರೆಯ ಲೆಕ್ಕದ ವಿವರ ನೀಡಿದರು.
ಮೈಸೂರು ದಸರೆಗೆ ಪೂರಕವಾಗಿ ನಡೆದ ಮಂಡ್ಯ, ಚಾಮರಾಜನಗರ ದಸರಾ ಉತ್ಸವಕ್ಕೆ ತಲಾ ಒಂದು ಕೋಟಿ ರೂ. ಹಾಗೂ ಹಾಸನ ದಸರಾಕ್ಕೆ 20 ಲಕ್ಷ ರೂ. ಸೇರಿ ಒಟ್ಟು 2.20 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.
ಸರ್ಕಾರ 2023ರ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಿತ್ತು. ಆದರೆ, ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ದಸರಾ ಆಚರಣೆಗೆ ತೀರ್ಮಾನಿಸಿತು ಎಂದರು.
ದಸರಾ ಆಚರಣಾ ಸಮಿತಿಗೆ ಈ ಬಾರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ರೂ. ಅನುದಾನ ಬಂದಿದೆ. ಜತೆಗೆ 2,25,70,000 ರೂ. ಪ್ರಾಯೋಜಕತ್ವದಿಂದ ಪಡೆಯಲಾಗಿದೆ. ಕಳೆದ ಬಾರಿ 32.50 ಲಕ್ಷ ರೂ. ಪ್ರಾಯೋಜಕತ್ವ ಬಂದಿತ್ತು ಎಂದು ವಿವರಿಸಿದರು.
ದಸರಾ ಜಂಬೂಸವಾರಿ, ಪಂಜಿನ ಕವಾಯಿತು ಟಿಕೆಟ್, ಗೋಲ್ಡ್ ಕಾರ್ಡ್ ಮಾರಾಟದಿಂದ 1,19,95,000 ರೂ., ಆಹಾರ ಮೇಳದಿಂದ ಬಂದ ರಾಜಸ್ವ ಸ್ವೀಕೃತಿ 81 ಸಾವಿರ ರೂ. ಸೇರಿ ಒಟ್ಟು 29.26 ಕೋಟಿ ರೂ. ಅನುದಾನ ಸಂಗ್ರಹವಾಗಿತ್ತು ಎಂದರು.
ವೆಚ್ಚದ ವಿವರ
ದಸರಾ ಉತ್ಸವ ಅಂಗವಾಗಿ ರಚನೆಯಾಗಿದ್ದ 22 ಉಪ ಸಮಿತಿಗಳು ಸೇರಿದಂತೆ ಅರಣ್ಯ ಇಲಾಖೆ, ರಂಗಾಯಣ ಹಾಗೂ ವಿವಿಧ ಕಾಮಗಾರಿಗಳಿಗೆ 27,05,22,049 ರೂ. ವೆಚ್ಚವಾಗಿದೆ. ಇದರಲ್ಲಿ ಸ್ವಾಗತ ಮತ್ತು ಆಮಂತ್ರಣ, ಸ್ಥಳಾವಕಾಶ, ಸಾರಿಗೆ, ಶಿಷ್ಟಾಚಾರ ಉಪಸಮಿತಿಗೆ 3.22 ಕೋಟಿ ರೂ., ಮೆರವಣಿಗೆ ಉಪಸಮಿತಿಗೆ 2.45 ಕೋಟಿ ರೂ., ಪಂಜಿನ ಕವಾಯತು ಉಪಸಮಿತಿಗೆ 1.24 ಕೋಟಿ ರೂ., ಸ್ತಬ್ಧಚಿತ್ರ ಉಪಸಮಿತಿಗೆ 25 ಲಕ್ಷ ರೂ., ರೈತ ದಸರಾ (ಗ್ರಾಮೀಣ ದಸರಾ)ಕ್ಕೆ 30 ಲಕ್ಷ ರೂ., ಸಾಂಸ್ಕೃತಿಕ ಉಪಸಮಿತಿಗೆ 2 ಕೋಟಿ ರೂ., ಲಲಿತಕಲೆ ಮತ್ತು ಕರಕುಶಲ ಉಪಸಮಿತಿಗೆ 20 ಲಕ್ಷ ರೂ., ಕವಿಗೋಷ್ಠಿ ಉಪಸಮಿತಿಗೆ 35 ಲಕ್ಷ ರೂ., ಯೋಗ ದಸರಾ ಉಪಸಮಿತಿಗೆ 15 ಲಕ್ಷ ರೂ., ಯುವ ಸಂಭ್ರಮ ಮತ್ತು ಯುವ ದಸರಾ ಉಪಸಮಿತಿಗೆ 7.88 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಗೆ 35 ಲಕ್ಷ ರೂ., ಚಲನಚಿತ್ರ ಉಪಸಮಿತಿಗೆ 45 ಲಕ್ಷ ರೂ., ಕುಸ್ತಿ ಉಪಸಮಿತಿಗೆ 45 ಲಕ್ಷ ರೂ., ಅರಣ್ಯ ಇಲಾಖೆಗೆ 1.60 ಕೋಟಿ ರೂ., ರಂಗಾಯಣಕ್ಕೆ 10 ಲಕ್ಷ ರೂ., ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗೆ ಮುಡಾ, ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದಿಂದ 6.05 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ವಾರ್ತಾ ಇಲಾಖೆ ಉಪ ನಿರ್ದೇಶಕ ಅಶೋಕ್‌ಕುಮಾರ್, ಸಹಾಯಕ ನಿರ್ದೇಶಕ ಹರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಇತರರು ಇದ್ದರು.
ಯುವ ದಸರೆಗೆ 7.88 ಕೋಟಿ ರೂ.!
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ ಯುವ ದಸರಾ ಮತ್ತು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ 8 ದಿನಗಳ ಯುವ ಸಂಭ್ರಮಕ್ಕೆ 7.88 ಕೋಟಿ ರೂ. ವ್ಯಯವಾಗಿದೆ.
ಅದ್ದೂರಿತನ ಕಡಿಮೆ ಮಾಡಿದ್ದರೂ ಕಲಾವಿದರು ಹಿಂದಿನಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಹಾಗಾಗಿ ಹಣ ಕಲಾವಿದರಿಗೆ ಹೆಚ್ಚು ಹೋಗಿದೆ ಎಂದು ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಕಳೆದ ಬಾರಿ ಅದ್ದೂರಿ ದಸರಾದಲ್ಲಿ ಆರು ದಿನಗಳ ಕಾಲ ಯುವ ದಸರಾ ನಡೆದಿದ್ದಲ್ಲದೇ ಪ್ರೇಕ್ಷಕರ ಕುಳಿತುಕೊಳ್ಳಲು ಜರ್ಮನ್ ರೂಫಿಂಗ್ ಟೆಕ್ನಾಲಜಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ರೂಫಿಂಗ್ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ವೆಚ್ಚ ಕಡಿಮೆ ಅಗಿದೆ ಎಂದರು.
ಇತರ ಮೂಲದಿಂದ ಬಂದ ಅನುದಾನ
ದಸರಾ ಆಚರಣಾ ಸಮಿತಿಗೆ 29.25 ಕೋಟಿ ರೂ. ಸಿಕ್ಕಿದ್ದು, ಅದನ್ನು ವಿವಿಧ ಉಪ ಸಮಿತಿಗೆಗಳಿಗೆ ಖರ್ಚು ಮಾಡಿದೆ. ನಗರದ ವಿವಿಧ ರಸ್ತೆ ಮತ್ತು ವೃತ್ತಗಳಲ್ಲಿ ಸೆಸ್ಕ್‌ನಿಂದ ಮಾಡಿದ್ದ ದೀಪಾಲಂಕಾರಕ್ಕೆ 6 ಕೋಟಿ ರೂ. ಖರ್ಚಾಗಿದ್ದು, ಅದನ್ನು ಸೆಸ್ಕ್ ಭರಿಸಲಿದೆ. ಸ್ವಚ್ಛತೆಗೆ ಪಾಲಿಕೆ ಶ್ರಮಿಸಿದ್ದು, ಅದಕ್ಕೆ 30 ಲಕ್ಷ ರೂ. ಖರ್ಚಾಗಿದೆ. ಅದನ್ನು ಪಾಲಿಕೆಯೇ ವ್ಯಯಿಸಲಿದೆ ಎಂದು ಡಿಸಿ ತಿಳಿಸಿದರು.
ಅರಮನೆ ಅಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಖರ್ಚು 5 ಕೋಟಿ ರೂ. ಆಗಿದ್ದು, ಅದನ್ನು ಅರಮನೆ ಮಂಡಳಿ ಭರಿಸಿದೆ. ಕೆಲ ಉಪ ಸಮಿತಿಗಳೇ ವೆಚ್ಚ ಭರಿಸಿರುವುದೆಲ್ಲ ಸೇರಿ 12 ಕೋಟಿ ರೂ. ಆಗಲಿದೆ. ಇವುಗಳ ಲೆಕ್ಕ ಸೇರಿಸಿದರೆ 42 ಕೋಟಿ ರೂ.ಗೂ ಅಧಿಕ ಹಣ ಖರ್ಚಾಗಿದ್ದರೂ ಸರ್ಕಾರದಿಂದ ಮತ್ತೆ ಅನುದಾನ ಕೇಳಿಲ್ಲ ಎಂದರು.