ಜಿಲ್ಲೆ

28ರಂದು ನಂಜನಗೂಡಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ

reportermys

ಮೈಸೂರು: ನಂಜನಗೂಡು ತಾಲೂಕಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನ.28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಶಾಸಕ ಹರ್ಷವರ್ಧನ್ ಹೇಳಿದರು.
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಅಂದು ಬೆಳಗ್ಗೆ 10.30ಕ್ಕೆ ಸರ್ಕಾರದಿಂದ ದೇವಸ್ಥಾನಕ್ಕೆ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಭೂಮಿಪೂಜೆ, ನುಗು ಏತ ನೀರಾವರಿ ಯೋಜನೆಗೆ ಚಾಲನೆ, ಯಡಿಯಾಲ ಭಾಗದ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಗೋಳೂರು (ಗೀಕಹಳ್ಳಿ) ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿದ್ಯುತ್ ಉಪ ಕೇಂದ್ರಗಳ ಶಂಕುಸ್ಥಾಪನೆ, ನಗರೋತ್ಥಾನ ಹಂತ -4ರಲ್ಲಿ ನಂಜನಗೂಡು ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ನಗರೋತ್ಥಾನ ಹಂತ-3ರಲ್ಲಿ ಗೌರಿಘಟ್ಟದ ಬೀದಿಯಲ್ಲಿರುವ ನಾಯಕ ಸಮುದಾಯ ಭವನ, ತಾಲೂಕು ಮಟ್ಟದ ಶ್ರೀಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮುಜರಾಯಿ ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ (ಭೈರತಿ), ಪೌರಾಡಳಿತ ಸಚಿವ ಎನ್.ನಾಗರಾಜ್(ಎಂಟಿಬಿ), ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಪ್ರತಾಪಸಿಂಹ, ಸುಮಲತಾ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ಹಲವು ಶಾಸಕರು, ಸಚಿವರು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿದ್ದರೂ ಈಡೇರಿರಲಿಲ್ಲ. ನಾನು ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಳಿ ಮನವಿ ಸಲ್ಲಿಸಿದಾಗ 80 ಕೋಟಿ ರೂ. ಅನುದಾನ ಮಂಜೂರು ಮಾಡಿದರು. ಬಳಿಕ ಬಿ.ಎಸ್.ಯಡಿಯೂರಪ್ಪ ಹಣ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಅದಕ್ಕೆ ಶಿಲಾನ್ಯಾಸ ಮಾಡುತ್ತಿದ್ದಾರೆ ಎಂದರು.
ನಂಜನಗೂಡು ಮತ್ತು ಸರಗೂರು ತಾಲೂಕುಗಳ 19 ಗ್ರಾಮಗಳ ಒಟ್ಟು 20 ಕೆರೆಗಳನ್ನು ಈ ಯೋಜನೆಯಡಿ ನೀರು ತುಂಬಿಸಲಾಗುತ್ತದೆ. 15 ರಿಂದ 20 ಸಾವಿರ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯ ಸಲುವಾಗಿ ನುಗು ಜಲಾಶಯ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಜೋಡೋ ಯಾತ್ರೆ ರಾಜಕೀಯ ಗಿಮಿಕ್:
ರಾಹುಲ್ಗಾಂಧಿ ನಡೆಸಿದ ಭಾರತ್ ಜೋಡೊ ಯಾತ್ರೆ ಪೂರ್ವ ನಿಯೋಜಿತವಾದುದು. ರಾಜಕೀಯ ಗಿಮಿಕ್‌ಗಾಗಿ ಗಾಂಧಿಜಯಂತಿಯಂದು ಬದನವಾಳುವಿಗೆ ಭೇಟಿ ನೀಡಲಾಗಿತ್ತು. ಈ ಯಾತ್ರೆಗೆ ಅಷ್ಟೊಂದು ಜನರನ್ನು ಎಲ್ಲಿಂದ, ಯಾವ ರೀತಿ ಕರೆ ತಂದರು ಎನ್ನುವುದು ನಮಗೆ ಗೊತ್ತಿದೆ. ಇಷ್ಟು ವರ್ಷಗಳ ಕಾಲ ಗಾಂಧಿ ಹೆಸರನ್ನು ಕಾಂಗ್ರೆಸ್‌ನವರು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹರ್ಷವರ್ದನ್ ದೂರಿದರು.
ಹುರಾ ಏತ ನೀರಾವರಿ ಯೋಜನೆಗೆ ಭೂಮಿ ಗುರುತಿಸದೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ಶಂಕುಸ್ಥಾಪನೆ ಮಾಡಿದರು. ಆದರೆ ಅದು ಪೂರ್ಣಗೊಳ್ಳದೆ, ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡದೆ ನಿಂತು ಹೋಗಿದೆ. ಅದಕ್ಕಾಗಿ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆಯಲು ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ಚುನಾವಣೆಯಲ್ಲಿ ನನಗೆ ಯಾರು ಎದುರಾಳಿಗಳಾಗುತ್ತಾರೆ ಎಂದು ತಲೆ ಕೆಡಿಸಿಕೊಂಡಿಲ್ಲ. ಯಾರೇ ಎದುರಾಳಿಗಳಾದರೂ ಎದುರಿಸುತ್ತೇನೆ. ನಾನು ಯಾವುದೇ ದಲ್ಲಾಳಿಗಳನ್ನು ಮುಂದಿಟ್ಟುಕೊಂಡು ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿಗೆ ಮುಂದಾಗಿಲ್ಲ. ಈ ರೀತಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದರು.