ಜಿಲ್ಲೆ

28ರಂದು ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮುತ್ತಿಗೆ

ಹಾಸನ: ತುರ್ತು ಪರಿಸ್ಥಿತಿ ಘೋಷಣೆಗೆ ಇಂದಿಗೆ 50 ವರ್ಷವಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯವಾಗಿದೆ. ಈ ಕರಾಳ ದಿನದ ಅಂಗವಾಗಿ ಜೂ.28ರ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ತಿಳಿಸಿದರು.
ತುರ್ತು ಪರಿಸ್ಥಿತಿಯು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳವಾದ ಅಧ್ಯಾಯ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸಲಹೆ ಮೇರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಈ ಜೂನ್ 25ಕ್ಕೆ 49 ವರ್ಷ ತುಂಬಲಿದ್ದು, 50ನೇ ವರ್ಷ ಆರಂಭವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಯ್ಕೆಯನ್ನು ರದ್ದುಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು, 1975ರ ಜೂನ್ 24ರಂದು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಅದರ ಮರುದಿನವೇ ರಾಷ್ಟ್ರಪತಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆಂತರಿಕ ಕ್ಷೋಭೆ ಮತ್ತು ಬಾಹ್ಯ ದಾಳಿಯ ಕಾರಣದಿಂದ ದೇಶದ ಭದ್ರತೆಗೆ ಅಪಾಯ ಒದಗಿದಾಗ ತುರ್ತು ಪರಿಸ್ಥಿತಿ ಘೋಷಿಸಲು ಸಂವಿಧಾನವು ಅವಕಾಶ ಮಾಡಿಕೊಡುತ್ತದೆ ಎಂದು ಕಾರಣ ನೀಡಿ 1975ರ ಜೂನ್ 25ರಂದು ಸಂವಿಧಾನದ 352(1)ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು ಎಂದರು.
ದೇಶದ ಪ್ರಜಾಪ್ರಭುತ್ವ ಸಂಪ್ರದಾಯಗಳಲ್ಲಿ ನಂಬಿಕೆ ಇರುವವರಿಗೆ ಜೂನ್ 25 ಮರೆಯಲಾಗದ ದಿನ. 50 ವರ್ಷಗಳ ಹಿಂದೆ ಇದೇ ದಿನ ಸಂವಿಧಾನ ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯಿತು. ಸಂವಿಧಾನವನ್ನು ಛಿದ್ರಗೊಳಿಸಲಾಯಿತು. ದೇಶವನ್ನು ಸೆರೆಮನೆಯಾಗಿ ಪರಿವರ್ತಿಸಲಾಯಿತು ಹಾಗೂ ಪ್ರಜಾಪ್ರಭುತ್ವವನ್ನು ಹೇಗೆ ಸಂಪೂರ್ಣವಾಗಿ ನಿಗ್ರಹಿಸಲಾಯಿತು ಎಂಬುದನ್ನು ಹೊಸ ಪೀಳಿಗೆ ಎಂದಿಗೂ ಮರೆಯಬಾರದು. ಇದೊಂದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಇಂತಹ ವಿಕೃತಿ ಮತ್ತೆ ಸಂಭವಿಸಲು ಅವಕಾಶ ನೀಡುವುದಿಲ್ಲ ಎಂದು ದೇಶವಾಸಿಗಳು ಸಂಕಲ್ಪ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಬಿಜೆಪಿ ವತಿಯಿಂದ ಈಗಾಗಲೇ ಅನೇಕ ಕಾರ್ಯಕ್ರಮವನ್ನು ಯೋಜನೆ ಮಾಡಲಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಈಗಾಗಲೇ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ತುರ್ತು ಪರಿಸ್ಥಿತಿಯ ದಿನದ ಅಂಗವಾಗಿ ಎಲ್ಲಾ ಮಂಡಲಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ನಡೆದಿದೆ. ಈ ಹಣ ದುರುಪಯೋಗವಾಗಿದ್ದು, ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜೂನ್ 28ರಂದು ಡಿಸಿ ಕಚೇರಿ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ನಗರ ಮಂಡಲದ ಅಧ್ಯಕ್ಷ ಯೋಗೀಶ್, ರಾಜ್ಯ ಓಬಿಸಿ ಮೋರ್ಚಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.