ಹಾಸನ: ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮೊಟ್ಟಮೊದಲ ನೊಬೆಲ್ ಪಾರಿತೋಷಕ ತಂದುಕೊಟ್ಟು ಭಾರತದ ಶ್ರೇಷ್ಠ ಭೌತವಿಜ್ಞಾನಿ ಭಾರತ ರತ್ನ ಸರ್.ಸಿ.ವಿ.ರಾಮನ್ ಅವರು 1928 ಫೆ.28ರಂದು ತಮ್ಮ ರಾಮನ್ ಎಫೆಕ್ಟ್ ಜಗತ್ತಾಹಿರುಗೊಳಿಸಿದರು. ಆ ದಿನದ ನೆನಪಿಗಾಗಿ ಎವಿಕೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ಉತ್ಸವ ಆಚರಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ತಿಳಿಸಿದರು.
ಎವಿಕೆ ಪದವಿಪೂರ್ವ ಕಾಲೇಜು, ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲೆ ಕ್ವಾರ್ಕ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನೋತ್ಸವ ಆಚರಣೆ ಮಾಡಲಾಗುತ್ತಿದೆ. ಭಾರತ ದೇಶದ ವಿಜ್ಞಾನದ ಸಾಧನೆಯನ್ನು ಜನತೆಗೆ ತಿಳಿಸುವ, ವಿಜ್ಞಾನ ಶಿಕ್ಷಣಕ್ಕೆ ಉತ್ತೇಜನ ನೀಡುವ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಫೆ.28ರ ಬುಧವಾರ ಎವಿಕೆ ಕಾಲೇಜಿನ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಬಾಲವಿಜ್ಞಾನಿ ಹಾಗೂ ವಿಜ್ಞಾನ ಶಾಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಾಸನ ಜಿಲ್ಲೆಯ ಪ್ರೌಢಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಮತ್ತು ಭಾಗವಹಿಸಿದ ಎಲ್ಲಾ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬಾಲ ವಿಜ್ಞಾನಿ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ಮಾರ್ಗದರ್ಶಿ ಶಿಕ್ಷರನ್ನೊಳಗೊಂಡ ತಂಡ ದೈನಂದಿನ ಜೀವನದಲ್ಲಿ ರಾಮನ್ ಪರಿಣಾಮಗಳ ಉಪಯೋಗಗಳ ಕುರಿತು ಸಂಶೋಧನಾ ಚಟುವಟಿಕೆ ಸೂಕ್ತ ದಾಖಲೆಗಳ ಮೂಲಕ ನಡೆಸಿ 10 ನಿಮಿಷಗಳಲ್ಲಿ ಆಕರ್ಷಕವಾಗಿ ಪ್ರಬಂಧ ಮಂಡಿಸಬೇಕಾಗಿರುತ್ತದೆ. ಹಾಗೂ ನನ್ನನ್ನು ಬೆರಗುಗೊಳಿಸಿದ ವಿಜ್ಞಾನಿ ಸ್ಪರ್ಧೆಯಲ್ಲಿ ಅವರ ಸಂಶೋಧನೆ ಕುರಿತು ವಿದ್ಯಾರ್ಥಿಯು 5 ನಿಮಿಷಗಳಲ್ಲಿ ಕಥಾ ವಿವರಣೆ ನೀಡಬೇಕು. ಇದರಲ್ಲಿ ಪ್ರತಿ ಪ್ರೌಢಶಾಲೆಗೆ ಒರ್ವ ವಿದ್ಯಾರ್ಥಿ ಭಾಗವಹಿಸಬಹುದು. ಮತ್ತು ವಿಜ್ಞಾನಶಾಲೆ ಈ ಸ್ಪರ್ಧೆಯಲ್ಲಿ ವಿಜ್ಞಾನ ಕ್ಷೇತ್ರ ಅಥವಾ ಬೋಧನೆಯಲ್ಲಿ ಪ್ರೌಢಶಾಲೆಯೊಂದು ಸಾಧಿಸಿದ ಪ್ರಗತಿಯನ್ನು ಪ್ರದರ್ಶಿಸುವ ಸೈನ್ಸ್ ಎಕ್ಸಪೋ ಪ್ರದರ್ಶನಗೊಳಿಸಬೇಕು ಎಂದು ತಿಳಿಸಿದರು.