ಜಿಲ್ಲೆ

28ಕ್ಕೆ ನೌಬಾದ್ ನರ್ಸರಿ ಆಶ್ರಮದಲ್ಲಿ ಸಾಂಸ್ಕೃತಿಕ ಸೌರಭ

Bidar

ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜೈ ಭಾರತ ಮಾತಾ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ನೌಬಾದ್ ಅರಣ್ಯ ನರ್ಸರಿ ಪಕ್ಕದ ಔದುಂಬರಲಿಂಗ ಆಶ್ರಮದಲ್ಲಿ ನ.28ರಂದು ಮಧ್ಯಾಹ್ನ 12.30ಕ್ಕೆ ಸಾಂಸ್ಕೃತಿಕ ಸೌರಭ ಆಯೋಜಿಸಲಾಗಿದೆ. ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿವಿಧೆಡೆಯಿಂದ ಆಗಮಿಸುವ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ಶಾಸ್ತ್ರೀಯ ಸಂಗೀತ, ವಚನ ಗಾಯನ, ಜನಪದ ಗೀತೆ, ಸುಗಮ ಸಂಗೀತ, ಸಮೂಹ ನೃತ್ಯ, ತಮಟೆ, ಚಿಟ್ಟ ಹಲಗೆ, ಲಮಾಣಿ ನೃತ್ಯ, ಹಗಲುವೇಷ, ಕರಡಿ ಮಜಲು, ಮೊಹರಂ ಪದ, ಹಂತಿ ಪದ ಮೊಳಗಲಿವೆ. ಐಕ್ಯತೆ, ತಾಯಿ ಕರುಳು ನಾಟಕ ಪ್ರದರ್ಶನ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಉದ್ಘಾಟಿಸಲಿದ್ದು, ಶಾಸಕ ಬಂಡೆಪ್ಪ ಖಾಶೆಂಪುರ ಅಧ್ಯಕ್ಷತೆ ವಹಿಸುವರು. ಸಂಸದ ಭಗವಂತ ಖೂಬಾ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ತಿಳಿಸಿದ್ದಾರೆ.

ಭರ್ಜರಿ ತಯಾರಿ: ಸಾಂಸ್ಕೃತಿಕ ಸೌರಭಕ್ಕೆ ಜೈ ಭಾರತ ಮಾತಾ ಸೇವಾ ಸಮಿತಿ ಭರ್ಜರಿ ಸಿದ್ಧತೆ ನಡೆಸಿದೆ. ವಿಶಾಲ ಆವರಣದಲ್ಲಿ ಹೆಚ್ಚು ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ನೋಡುವ ವ್ಯವಸ್ಥೆ ಮಾಡಲಾಗಿದೆ. ಬಂದವರಿಗೆಲ್ಲ ಸಮಿತಿಯು ಉತ್ತರ ಕರ್ನಾಟಕ ಶೈಲಿ ಊಟದ ವ್ಯವಸ್ಥೆ ಮಾಡುತ್ತಿದೆ. ಈ ವೇಳೆ ಸದ್ಗುರು ಶ್ರೀ ಹವಾ ಮಲ್ಲಿನಾಥ ಉಪಸ್ಥಿತರಿದ್ದು, ದಿನವಿಡೀ ಭಕ್ತರಿಗೆ ದರ್ಶನ ನೀಡುವರು. ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸುವ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ಸಮಿತಿ ರಾಷ್ಟ್ರೀಯ ವಕ್ತಾರ ವೈಜಿನಾಥ ಝಳಕಿ ಕೋರಿದ್ದಾರೆ.