ಜಿಲ್ಲೆ

ಬಿಬಿಎಂಪಿಯಿಂದ 2,877 ಕೋಟಿ ರೂ. ಆಸ್ತಿತೆರಿಗೆ ಸಂಗ್ರಹ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಈವರೆಗೆ 2,877 ಕೋಟಿ ರೂ. ಮೊತ್ತದ ಆಸ್ತಿತೆರಿಗೆ ಪಾವತಿಸಿದ್ದು, ಬುಧವಾರ (ಜು.31) ಕೊನೆಯ ದಿನವಾಗಿರುತ್ತದೆ. ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯಡಿ ದಂಡ ಇಲ್ಲದೆ ಹಿಂಬಾಕಿ ಪಾವತಿಯ ಗಡುವು ಮುಗಿಯಲಿದ್ದು, ಮತ್ತೆ ಸಮಯ ವಿಸ್ತರಣೆ ಮಾಡುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಪಾಲಿಕೆ ಹಿಂಬಾಕಿ (ಒಟಿಎಸ್) ಸೇರಿ ಒಟ್ಟು 5,200 ಕೋಟಿ ರೂ. ಆಸ್ತಿತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಲೆಕ್ಷನ್ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕಾರಣ ಮೇ 31ರವರೆಗಿದ್ದ ಗಡುವನ್ನು ಜು.31ರವರೆಗೆ ವಿಸ್ತರಿಸಲಾಗಿತ್ತು. ಜತೆಗೆ ಹಿಂದಿನ 5 ವರ್ಷದ ಅವಧಿಯ ಹಿಂಬಾಕಿ ಮೊತ್ತವನ್ನು ದಂಡ ಇಲ್ಲದೆ ಪಾವತಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದರಿಂದಾಗಿ ಹೆಚ್ಚಿನ ಆದಾಯ ಸಂಗ್ರಹಿಸುವ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ. ಗಡುವು ಮೀರಿದ ಬಳಿಕ ದಂಡದ ಹಣದೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ರಾತ್ರಿ 9ರವರೆಗೆ ಕಚೇರಿ ಓಪನ್:

ಒಟಿಎಸ್ ಸೇರಿ ಆಸ್ತಿತೆರಿಗೆ ಪಾವತಿಗೆ ಬುಧವಾರ ಕಡೆಯ ದಿನವಾಗಿರುವುದರಿಂದ ಪಾಲಿಕೆಯ ಎಲ್ಲ ವಲಯ ಕಚೇರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳು ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಒಟಿಎಸ್ ಅಡಿಯಲ್ಲಿ ಆಸ್ತಿತೆರಿಗೆ ತಂತ್ರಾಂಶದ ಮೂಲಕ ಪಾವತಿಸುವಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ, ಪಾಲಿಕೆ ದಾಖಲೆಯಲ್ಲಿ ಅಸ್ತಿತ್ವದಲ್ಲಿರುವ ಸ್ವತ್ತುಗಳು ಎಸ್‌ಎಎಸ್ ಅರ್ಜಿ ಸಂಖ್ಯೆಯನ್ನು ನಮೂದಿಸಿ ಭಾಗಶಃ ಪಾವತಿ ಅಥವಾ ಪೂರ್ಣ ಪಾವತಿಯನ್ನು ವಲಯ ಕಚೇರಿಯಲ್ಲಿ ಡಿಮಾಂಡ್ ಡ್ರ್‌ಫ್ಟ್​​ (ಡಿಡಿ) ಸ್ವೀಕರಿಸಲಾಗುತ್ತದೆ. ನಂತರ ಇದನ್ನು ಪರಿಶೀಲಿಸಲಾಗುತ್ತದೆ ಎಂದು ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತರು ತಿಳಿಸಿದ್ದಾರೆ.

ಗಡುವು ವಿಸ್ತರಿಸಲು ಎಫ್‌ಕೆಸಿಸಿಐ ಮನವಿ:

ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಸುವ ಅವಧಿ ಜು.31ಕ್ಕೆ ಮುಕ್ತಾಯವಾಗಲಿದ್ದು, ಇನ್ನಷ್ಟು ಸ್ವತ್ತದಾರರು ಒಟಿಎಸ್ ಅಡಿಯಲ್ಲಿ ತೆರಿಗೆ ಪಾವತಿಸಬೇಕಿರುವ ಕಾರಣ ಗಡುವನ್ನು ಆ.31ರವರೆಗೆ ವಿಸ್ತರಿಸಲು ಎಫ್‌ಕೆಸಿಸಿಐ ಪಾಲಿಕೆಯನ್ನು ವಿನಂತಿಸಿದೆ.

ಒಟಿಎಸ್ ಯೋಜನೆ ಉತ್ತಮವಾಗಿದ್ದು, ಈ ಯೋಜನೆಯಿಂದ ವ್ಯಾಪಾರ, ಕೈಗಾರಿಕೆ ಮತ್ತು ಸೇವಾ ವಲಯಗಳ ಸದಸ್ಯರುಗಳು ಬಳಸಿಕೊಳ್ಳಬಹುದಾಗಿದೆ. ಆದರೂ, ಇನ್ನೂ ಅನೇಕರು ತಮ್ಮ ದಾಖಲೆಗಳನ್ನು ಪರಿಶೀಲಿಸುವ ಮತ್ತು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. ಹೀಗಾಗಿ ಗಡುವನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವಂತೆ ಎ್ಕೆಸಿಸಿಯ ಅಧ್ಯಕ್ಷ ರಮೇಶ್ಚಂದ್ರ ಲಹೋಟಿ ಮನವಿ ಮಾಡಿದ್ದಾರೆ.

ಒಟಿಎಸ್ ಬಾಕಿ ವಿವರ (ಜು.29ರವರೆಗೆ):

ವಲಯದ ಹೆಸರು ಆಸ್ತಿಗಳು ಮೊತ್ತ *

ಬೊಮ್ಮನಹಳ್ಳಿ 45,381 71.10

ದಾಸರಹಳ್ಳಿ 13,176 18.71

ಮಹದೇವಪುರ 60,485 124.23

ಆರ್.ಆರ್.ನಗರ 44,570 43.27

ಯಲಹಂಕ 29,867 41.81

ಪೂರ್ವ 39,400 76.52

ದಕ್ಷಿಣ 27,157 84.11

ಪಶ್ಚಿಮ 27,870 89.20

ಒಟ್ಟು 2,87,906 548.94

* ಕೋಟಿ ರೂ.ಗಳಲ್ಲಿ