ಜಿಲ್ಲೆ

28 ಲಕ್ಷ ರೂ. ಮೌಲ್ಯದ ಕಳ್ಳತನದ ವಸ್ತು ವಶಕ್ಕೆ

ಭಾಲ್ಕಿ: ಉಪ ವಿಭಾಗದ ವಿವಿಧ ಠಾಣೆ ವ್ಯಾಪ್ತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂಬತ್ತು ಆರೋಪಿಗಳನ್ನು ಬಂಧಿಸಿ, ೨೮.೧೭ ಲಕ್ಷ ರೂ. ಮೌಲ್ಯದ ವಿವಿಧ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದರು.
ಕಮಲನಗರ ಠಾಣೆ ವ್ಯಾಪ್ತಿಯಲ್ಲಿ ನೀರೆತ್ತುವ ೩೦ ಮೋಟಾರ್, ರೋಡ್ ರೋಲರ್‌ನಲ್ಲಿನ ೫೦ ಲೀಟರ್ ಡೀಸೆಲ್, ಅಪರಾಧಕ್ಕೆ ಬಳಸಿದ ಟವೇರಾ, ಬೊಲೇರೊ ವಾಹನ ಸೇರಿ ಸುಮಾರು ೧೩ ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨.೮೦ ಲಕ್ಷ ರೂ. ಮೌಲ್ಯದ ಎಂಟು, ಆರು ಮತ್ತು ಒಂದು ಸಾವಿರ ವ್ಯಾಟ್‌ನ ಒಟ್ಟು ನಾಲ್ಕು ಎಂಪ್ಲಿಫೈರ್ ವಶಕ್ಕೆ ಪಡೆದಿದ್ದು, ಓರ್ವ ಕಳ್ಳನನ್ನು ಬಂಧಿಸಲಾಗಿದೆ. ಮೇಹಕರ್ ಠಾಣೆ ವ್ಯಾಪ್ತಿಯಲ್ಲಿ ಕಿರ್ಲೋಸ್ಕರ್ ಇಂಜಿನ್, ನಾಲ್ಕು ಹ್ಯಾಂಡ್‌ಪAಪ್, ಹೈಡ್ರೊಲಿಕ್ ಮಶಿನ್, ನಾಲ್ಕು ಕಬ್ಬಿಣದ ಪ್ಲೇಟ್ ಸೇರಿ ೧೨.೩೬ ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಿ, ನಾಲ್ವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮೋಟಾರ್, ಪಂಪ್‌ಸೆಟ್ ಸೇರಿ ಇತರ ಕೃಷಿ ಬಳಕೆಯ ಸಾಮಗ್ರಿ ಕಳ್ಳತನ ಆಗಿರುವ ಬಗ್ಗೆ ರೈತ ಸಂಘದ ಮುಖಂಡರು, ರೈತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ, ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಕಳ್ಳರನ್ನು ಪತ್ತೆ ಹಚ್ಚಿದ ಎಸ್‌ಪಿ ಚನ್ನಬಸವಣ್ಣ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸೇರಿ ಎಲ್ಲ ಪೊಲೀಸ್ ಸಿಬ್ಬಂದಿಯನ್ನು ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಮಲ್ಲಿಕಾರ್ಜುನ ಸ್ವಾಮಿ ಸನ್ಮಾನಿಸಿದರು.