ಜಿಲ್ಲೆ

27ರಿಂದ 2ನೇ ಹಂತದ ಪಾದಯಾತ್ರೆ : ಪೂರ್ವಭಾವಿ ಸಭೆಯಲ್ಲಿ ಡಿ.ಕೆ.ಸುರೇಶ್ ಮಾಹಿತಿ

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ ಎರಡನೇ ಚರಣಕ್ಕೆ ರಾಮನಗರದಿಂದ ೆ.27ರಂದು ಚಾಲನೆ ದೊರೆಯಲಿದ್ದು, ಕೇವಲ 5 ದಿನಗಳಲ್ಲಿ ಪಾದಯಾತ್ರೆ ಅಂತ್ಯವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದರು.

ಪಾದಯಾತ್ರೆ ಸಂಬಂಧ ಕೆಂಗಲ್‌ನ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ೆ.27ರ ಬೆಳಗ್ಗೆ 9 ಗಂಟೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹಿರಿಯ ಕಾಂಗ್ರೆಸ್ ನಾಯಕರು ಎರಡನೆ ಹಂತದ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮೊದಲ ದಿನ ಬಿಡದಿಯಲ್ಲಿ ಮುಕ್ತಾಯಗೊಳ್ಳಲಿದೆ. ಎರಡನೇ ದಿನ ಕೆಂಗೇರಿ ಮುಟ್ಟಲಿದ್ದು, ಬಜೆಟ್ ಕಾರಣದಿಂದಾಗಿ ಬೆಂಗಳೂರಿನಲ್ಲಿ 5 ದಿನಗಳ ಯಾತ್ರೆಯನ್ನು ಮೂರು ದಿನಗಳಿಗೆ ಮೊಟಕುಗೊಳಿಸಲಾಗಿದೆ. ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಎಂದಿನಂತೆ ಯಾತ್ರಿಗಳಿಗೆ ಆತಿಥ್ಯ ಮುಂದುವರಿಯಲಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೆಹಲಿಯಲ್ಲಿ ನಡೆದ ಸಭೆ ವೇಳೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದ್ದೆವು, ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಈವರೆವಿಗೂ ಯೋಜನೆ ಸಂಬಂಧ ಚಕಾರ ಎತ್ತಲಿಲ್ಲ. ಯೋಜನೆ ಜಾರಿ ತರುವುದು ಕೇಂದ್ರದ ಮೇಲೆ ಒತ್ತಡ ಹೇರುವುದು ಸಿಎಂ ಜವಾಬ್ದಾರಿ ಎಂದು ಸುರೇಶ್ ಹೇಳಿದರು.

ಎಚ್‌ಡಿಕೆ ಆಘಾತ: ವಿಧಾನಪರಿಷತ್ ಸದಸ್ಯ ರವಿ ಮಾತನಾಡಿ, ಮೊದಲ ಹಂತದ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಯಶಸ್ಸು ದೊರೆತಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಶಕ್ತಿ ಏನು ಎನ್ನುವುದು ಗೊತ್ತಾಗಿದೆ. ಈ ಯಶಸ್ಸು ತಡೆಗಟ್ಟುವ ಸಲುವಾಗಿ ಕರೊನಾ ಅಂಕಿಗಳನ್ನು ನೀಡುತ್ತಾ, ಅನಧಿಕತ ವರದಿ ನೀಡಲು ಮುಂದಾಯಿತು. ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಯ್ತು ಎಂಬುದಾಗಿ ಬಿಂಬಿಸಿತು ಎಂದು ಹೇಳಿದರು. ಮೊದಲ ದಿನ 20 ಸಾವಿರ, ಎರಡನೇ ದಿನ 25 ಮೂರನೇ ದಿನ 30ಸಾವಿರ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಇದು ವಿರೋಧಿಗಳ ನಿದ್ದೆ ಗೆಡಿಸಿತು. ಅದರಲ್ಲೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಹೆಚ್ಚು ಆಘಾತವಾಗಿದೆ. ಯಶಸ್ಸು ಹೆಚ್ಚಾಗುತ್ತಿರುವುದನ್ನು ಕಂಡ ಕುಮಾರಸ್ವಾಮಿ ಅವರು, ಬಾಯಿಗೆ ಬಂದಂತೆ ಹೇಳಿಕೆ ನೀಡಲು ಆರಂಭಿಸಿದರು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ, ಸಿ.ಎಂ. ಲಿಂಗಪ್ಪ, ಕೆ.ಶೇಷಾದ್ರಿ, ಎಸ್.ಗಂಗಾಧರ್, ಇಕ್ಬಾಲ್ ಹುಸೇನ್, ಸೇರಿ ಹಲವು ಮುಖಂಡರು ಭಾಗವಹಿಸಿದ್ದರು.

ಎಚ್‌ಡಿಕೆಗೆ ಟಾಂಗ್: ಮೇಕೆದಾಟು ಪಾದಯಾತ್ರೆ ಕುರಿತು ವ್ಯಂಗ್ಯವಾಡಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ ಸಂಸದ ಸುರೇಶ್, ಪ್ರಧಾನಮಂತ್ರಿ ಕುಟುಂಬದವರು. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರಿಗಿರುವ ಬುದ್ಧಿ, ತಿಳಿವಳಿಕೆ ಈ ರಾಜ್ಯದಲ್ಲಿ ಯಾರಿಗೂ ಇಲ್ಲ. ಅವರು ಏನು ಮಾತನಾಡಿದರೂ ಕೇಳಬೇಕಷ್ಟೇ, ಪ್ರಶ್ನೆ ಮಾಡಬಾರದು. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಏನು ಹೇಳ್ತಾರೋ ಕೇಳಬೇಕು, ಪ್ರಶ್ನೆ ಮಾಡಬಾರದು. ಈ ಯೋಜನೆಯಲ್ಲಿ ಟೆಕ್ನಿಕಲ್ ಸಮಸ್ಯೆ ಏನೂ ಇಲ್ಲ. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇಚ್ಛಾ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು.

ಪ್ರಸ್ತುತ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದು, ಪರಿಸರ ಇಲಾಖೆ ಅನುಮತಿ ಕೊಡಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ. ಕಾವೇರಿ ಪ್ರಾಧಿಕಾರ ರಚನೆಯಾಗಿದೆ, ಅದರಲ್ಲಿ ಕುಡಿಯುವ ನೀರಿನ ಯೋಜನೆ ಎಂದು ಕೇಂದ್ರ ಅನುಮೋದನೆ ಕೊಡಬೇಕಿದೆ ಎಂದರು