ಜಿಲ್ಲೆ

27ರಂದು ಕೆಂಪೇಗೌಡರ ಜಯಂತಿ:ಅದ್ದೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ

ಹಾಸನ: ನಗರದಲ್ಲಿ ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂ 27ರಂದು ಅದ್ದೂರಿಯಾಗಿ ನಡೆಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಮಹಾನ್ ವ್ಯಕ್ತಿಗಳ ಜಯಂತಿಯನ್ನ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಹಾಗೂ ಅಚ್ಚುಕಟ್ಟಾಗಿ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ,ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರನ್ನ ಆಹ್ವಾನಿಸಲಾಗುವುದು ಯಾವುದೇ ಲೋಪವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು

ಮಹಾನ್ ವ್ಯಕ್ತಿಗಳ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು, ಎಲ್ಲಾ ವರ್ಗದವರು ಭಾಗಿಯಾಗಬೇಕು. ಇದು ಸರ್ಕಾರದ ಅಭಿಲಾಷೆಯು ಕೂಡ ಆದ್ದರಿಂದ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಎಲ್ಲಾ ಶಾಸಕರ ಸಲಹೆ ಸೂಚನೆಯಂತೆ ಅದ್ದೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ನಗರಸಭೆಯವರು ಕಾರ್ಯಕ್ರಮದ ನಡೆಯುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಬೇಕು, ನಗರದ ಎಲ್ಲೆಡೆ ತೋರಣ ಕಟ್ಟಿಸಬೇಕು. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಬೇಕು ಎಂದು ಸೂಚನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್ ಮಾತನಾಡಿ, 27ರಂದು ಬೆಳಗ್ಗೆ 10 ಗಂಟೆಗೆ ಬೃಹತ್ ಮೆರವಣಿಗೆಯನ್ನ ನಗರದ ಹಾಸನಂಬ ಕಲಾ ಕ್ಷೇತ್ರದಿಂದ ಆರಂಭಗೊಳ್ಳಲಿದೆ. ಈ ಮೆರವಣಿಗೆಯಲ್ಲಿ 10 ಕಲಾತಂಡಗಳು ಹಾಗೂ ಎರಡು ಬೆಳ್ಳಿರಥಗಳಲ್ಲಿ ಒಂದರಲ್ಲಿ ಕೆಂಪೇಗೌಡರ ಫೋಟೋ ಇನ್ನೊಂದು ಬೆಳ್ಳಿರಥದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನ ಮೆರವಣಿಗೆ ಮಾಡಲಾಗುವುದು ಎಂದು ಹೇಳಿದರು.

ಅಲ್ಲದೆ ಕಾರ್ಯಕ್ರಮದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಎಲ್ಲಾ ಸಮಿತಿಗಳನ್ನ ರಚನೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದ್ದು, ಸೂಕ್ತ ವ್ಯವಸ್ಥೆಗಳನ್ನು ಕೂಡ ಮಾಡಲಾಗುವುದು ಮತ್ತು ಸಭೆಯಲ್ಲಿ ಶಿಷ್ಟಾಚಾರವನ್ನು ಪಾಲಿಸಲಾಗುವುದು ಎಂದು ತೀಳಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ಜಯಂತಿಗೆ ಸುಮಾರು 25 ಲಕ್ಷ ರೂಗಳನ್ನು ಅಂದಾಜಿಸಲಾಗಿದೆ. ಸರ್ಕಾರದಿಂದ 5 ಲಕ್ಷ ಅನುದಾನವನ್ನ ನೀಡಲಾಗುತ್ತದೆ. ಉಳಿದ ಹಣವನ್ನು ಸ್ಥಳೀಯವಾಗಿ ಕ್ರೂಡಿಕರಿಸಲಾಗುವುದು ಈಗಾಗಲೇ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಕಾರ್ಯಗಳನ್ನು ಕೂಡ ಕೈಗೊಳ್ಳಲಾಗಿದೆ ಎಂದು ಹೇಳಿದರು

ಸಭೆಯಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎ ಮಂಜು , ಸ್ವರೂಪ್, ನಗರಸಭೆ ಅಧ್ಯಕ್ಷ ಮೋಹನ್, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳು ಹಾಜರಿದ್ದರು.

ನಗರಸಭೆ ಆಯುಕ್ತರಿಗೆ ತರಾಟೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಜ್ಯಮಟ್ಟದ ಕೆಂಪೇಗೌಡ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಗೆ ತಡವಾಗಿ ಬಂದ ನಗರಸಭೆ ಆಯುಕ್ತರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ನಗರಸಭೆ ಆಯುಕ್ತರು ಎಲ್ಲಿ ಎಂದು ಪ್ರಶ್ನಿಸಿದರು. ಈ ವೇಳೆ ಸಭೆಗೆ ನಗರಸಭೆ ಆಯುಕ್ತ ಸತೀಶ್ ಆಗಮಿಸಿರಲಿಲ್ಲ. ಸಭೆಗೆ ತಡವಾಗಿ ಬಂದ ಅವರನ್ನು ಸಚಿವ ಕೆ.ಎನ್.ರಾಜಣ್ಣ ಗರಂ ಆದರು. ಸಭೆ ಬಗ್ಗೆ ಮೊದಲೇ ಹೇಳಿರಲಿಲ್ಲವಾ ನಿನಗೆ, ಕೆಲಸ ಇದ್ದರೆ ಬೇರೆ ಸಮಯದಲ್ಲಿ ಏನು ಮಾಡುತ್ತಿದ್ದೆ. ಯೂಸ್ ಲೆಸ್ ಫೆಲೋ ಇದೆಲ್ಲಾ ಇಟ್ಕೊಬೇಡ. ಕಾರ್ಯಕ್ರಮದಲ್ಲಿ ಸ್ವಚ್ಚತೆ ಬಗ್ಗೆ ಮುತುವರ್ಜಿ ವಹಿಸಿ ನೀನೇ ಮಾಡಬೇಕು. ನೀನು ಯಾವನಿಗಾದ್ರು ಹೇಳೋದು, ಅವನು ಮಾಡಲಿಲ್ಲ ಅಂತ ಹೇಳೋದು ಇವೆಲ್ಲಾ ನಡೆಯಬಾರದು, ನೀನೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದರು.

ಸಿನಿಮಾ ನಟರು ಬೇಡ

ಸಭೆಯಲ್ಲಿ ನಮ್ಮ ಜಿಲ್ಲೆಯ ಸಿನಿಮಾ ಮಂದಿಯನ್ನು ಕರೆಸೋಣ ಎಂದು ಅರಕಲಗೂಡು ಶಾಸಕ ಎ.ಮಂಜು ಪ್ರಸ್ತಾಪಿಸಿದರು. ಇದಕ್ಕೆ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಿರೋಧ ವ್ಯಕ್ತಪಡಿಸಿದರು.

ಕೆಂಪೇಗೌಡ ಜಯಂತಿ ಆಚರಣೆಗೆ ಸಿನಿಮಾ ನಟರನ್ನು ಕರೆಸೋದು ಬೇಡ, ಅವರು ಬಂದರೆ ಸ್ವಾಮೀಜಿಯವರನ್ನೂ ಕೇಳಲ್ಲ, ನಮ್ಮನ್ನೂ ಕೇಳಲ್ಲ ನಿಮ್ಮನ್ನೂ ಕೇಳಲ್ಲ. ಡೈಲಾಗ್ ಹೇಳಿ ಅಂತಾರೆ, ಹಾಡು ಹೇಳಿ ಅಂತಾರೆ. ಅದಕ್ಕೆ ನಾನು ಮಾತ್ರ ಯಾವುದೇ ಪ್ರೋಗ್ರಾಂಗಳಿಗೆ ಸಿನಿಮಾ ನಟರನ್ನು ಕರೆಸೋದಿಲ್ಲ. ಇಲ್ಲಿಯವ ಇದ್ದರೆ ಬೇರೆ ಕಾರ್ಯಕ್ರಮ ಮಾಡೋಣ. ನಾನು ಮಾತ್ರ ಆ ರೀತಿಯ ಅಭಿಪ್ರಾಯದವನು. ಸರಿ ಇದ್ದರೆ ಹೇಳಿ, ಸರಿಲ್ಲ ಅಂದ್ರೂ ಹೇಳಿ ಎಂದರು. ಕೊನೆಗೆ ಆಯ್ತು ನಿಮ್ಮ ಅಭಿಪ್ರಾಯಕ್ಕೆ ಸಮ್ಮತಿ ಎಂದು ಶಾಸಕ ಎ.ಮಂಜು ಹೇಳಿದರು.