ಜಿಲ್ಲೆ

27ರಂದು ಕೆಂಪೇಗೌಡ ಜಯಂತಿ; ಅರ್ಥಪೂರ್ಣ ಆಚರಣೆಗೆ ಎಡಿಸಿ ಸೂಚನೆ

ಹಾಸನ: ನಾಡಪ್ರಭು ಕೆಂಪೆಗೌಡ ಜಯಂತಿಯನ್ನು ಜೂ.27ರಂದು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಸಿದ್ಧತೆಗೆ ಕ್ರಮಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೆಂಪೆಗೌಡ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯಂತಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸುವಂತೆ ತಿಳಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಪುಸ್ತಕಗಳನ್ನು ನೀಡುವಂತೆ ಸೂಚಿಸಿದರು.

ಜೂ.27 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ 11 ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲು ಹಾಗೂ ಯುವ ಜನತೆಯಲ್ಲಿ ಕೆಂಪೇಗೌಡರ ವ್ಯಕ್ತಿತ್ವ ಮತ್ತು ಅವರ ಚಿಂತನೆಗಳು, ಆದರ್ಶಗಳು ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳ ಕುರಿತು ಮಾತನಾಡುವ ಉತ್ತಮ ಬಾಷಣಕಾರರನ್ನು ಆಹ್ವಾನಿಸುವಂತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಮಲ್ಲೇಶ ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಮತ್ತಿತರರು ಭಾಗವಹಿಸಿದ್ದರು.