ಮೈಸೂರು: ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಜೂ.27ರಂದು ಅರ್ಥಪೂರ್ಣವಾಗಿ ಆಚರಿಸಲು ಒಕ್ಕಲಿಗ ಸಮುದಾಯದ ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಯಿತು.
ಬೋಗಾದಿ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಶನಿವಾರ ಆಯೋಜಿಸಿದ್ದ ಒಕ್ಕಲಿಗ ಸಂಘ-ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಈ ಬಾರಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಆಚರಿಸಲು ಸಮುದಾಯದ ಮುಖಂಡರು ಸಂಪೂರ್ಣ ಬೆಂಬಲ ಸೂಚಿಸಬೇಕು. ಕಳೆದ ಬಾರಿ ಮೈಸೂರು ತಾಲೂಕಿಗೆ ಮಾತ್ರ ಜಯಂತಿ ಪ್ರಚಾರದ ರಥಯಾತ್ರೆ ಸೀಮಿತಗೊಂಡಿತ್ತು. ಆದರೆ ಈ ಬಾರಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಪ್ರಚಾರದ ರಥಯಾತ್ರೆಗೆ ನಡೆಸಬೇಕು. ಇದಕ್ಕಾಗಿ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಿ. ಶಾಂತಿ ಸೌಹಾರ್ದತೆಯಿಂದ ಪಕ್ಷಾತೀತವಾಗಿ ಆದ್ದೂರಿ ಜಯಂತಿ ಆಚರಿಸಲು ಮುಂದಾಗಬೇಕು ಎಂದು ಹೇಳಿದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ಸದ್ಯದಲ್ಲೇ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಮೈಸೂರಿನಲ್ಲಿ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ. ಇದಕ್ಕಾಗಿ ಕಲಾಮಂದಿರದ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮೈಸೂರು ಮತ್ತು ಚಾಮರಾಜನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಮಾತನಾಡಿ, ಕೆಂಪೇಗೌಡರ ಜೀವನ, ಆಳ್ವಿಕೆ ಕುರಿತು ಜನತೆಗೆ ತಿಳಿಸಿಕೊಡುವ ಕಾರ್ಯ ಆಗಬೇಕು. ಅವರ ಸಾಧನೆ ತಿಳಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ರಥಯಾತ್ರೆ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆದ ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್, ಕಾರ್ಯದರ್ಶಿ ಚೇತನ್, ವಿದ್ಯಾ ವಿಕಾಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕವೀಶ್‌ಗೌಡ, ನಂಜನಗೂಡು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನರಸಿಂಹಸ್ವಾಮಿ, ಕೆ.ಆರ್.ನಗರ ತಾಲೂಕು ಒಕ್ಕಲಿಗರ ಅಧ್ಯಕ್ಷ ಅಣ್ಣೇಗೌಡ, ನಗರಪಾಲಿಕೆ ಸದಸ್ಯ ಪ್ರೇಮಾ ಶಂಕರೇಗೌಡ, ಪುಷ್ಪಲತಾ ಜಗನ್ನಾಥ್, ಪೈ.ಶ್ರೀನಿವಾಸ್, ಒಕ್ಕಲಿಗ ಸಂಘದ ಪೂರ್ವ ವಲಯದ ಅಧ್ಯಕ್ಷ ಸುರೇಶ್‌ಗೌಡ, ಹುಣಸೂರಿನ ರಾಮಕೃಷ್ಣೇಗೌಡ, ಬನ್ನೂರಿನ ರಾಮಸ್ವಾಮಿ, ಕನ್ನಡ ಕಾವಲು ಪಡೆಯ ಅಧ್ಯಕ್ಷ ಎಂ.ಮೋಹನ್‌ಕುಮಾರ್‌ಗೌಡ, ಕಿರಣ್ ಮಾದೇಗೌಡ ಇತರರು ಇದ್ದರು.