ಜಿಲ್ಲೆ

27ಕ್ಕೆ ತೀರ್ಥಹಳ್ಳಿಗೆ ಸಿಎಂ ಆಗಮನ; 750 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ; ಎಲೆಚುಕ್ಕೆ ರೋಗ ಪೀಡಿತ ತೋಟಕ್ಕೂ ಭೇಟಿ

Shivamogga

ತೀರ್ಥಹಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನ.27ರಂದು ತೀರ್ಥಹಳ್ಳಿಗೆ ಮೊದಲ ಬಾರಿ ಆಗಮಿಸಲಿದ್ದು, 750 ಕೋಟಿ ರೂ.ಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಜತೆಗೆ ಎಲೆಚುಕ್ಕೆ ರೋಗ ತಗುಲಿರುವ ಅಡಕೆ ತೋಟಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹೆಲಿಕಾಪ್ಟರ್‌ನಲ್ಲಿ ಮಧ್ಯಾಹ್ನ ಒಂದು ಗಂಟೆಗೆ ಬಾಳೇಬೈಲು ಸರ್ಕಾರಿ ಕಾಲೇಜಿನ ಮೈದಾನಕ್ಕೆ ಆಗಮಿಸುವ ಸಿಎಂ, ಕಾಲೇಜಿನ 10 ಕೋಟಿ ರೂ. ವೆಚ್ಚದ ವಿಸ್ತರಣಾ ಕಟ್ಟಡ ಉದ್ಘಾಟಿಸುವರು. ನಂತರ ಉಂಟೂರುಕಟ್ಟೆ ಸಮೀಪದ ಅಡಕೆ ತೋಟಗಳಿಗೆ ಭೇಟಿ ನೀಡುವರು. ಪಪಂ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ನಂತರ ಅದೇ ಮೈದಾನದಲ್ಲಿ ಮುಳುಗಡೆ ಸಂತ್ರಸ್ತರ ಮನವಿ ಸ್ವೀಕರಿಸಲಿದ್ದಾರೆ. ಭೋಜನ ಮುಗಿಸಿದ ನಂತರ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವ್ಯಾವ ಕಾಮಗಾರಿಗೆ ಚಾಲನೆ?: 10 ಕೋಟಿ ರೂ. ವೆಚ್ಚದ ಸರ್ಕಾರಿ ಕಾಲೇಜಿನ ಕಟ್ಟಡ ಹಾಗೂ 4.05 ಕೋಟಿ ರೂ. ಪಪಂ ನೂತನ ಕಟ್ಟಡದ ಉದ್ಘಾಟನೆ, 344 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 110 ಕೋಟಿ ರೂ. ಜಲಜೀವನ ಮಿಷನ್ ಯೋಜನೆ, 107 ಕೋಟಿ ರೂ. ಗ್ರಾಮೀಣ ರಸ್ತೆಗಳು, 26 ಕೋಟಿ ರೂ.ಗಳ ಹೊಸಳ್ಳಿ- ತೂದೂರು ರಸ್ತೆ, 24 ಕೋಟಿ ರೂ. ವೆಚ್ಚದ ಬಿಲ್ಸಾಗರ್ ಸೇತುವೆ, 15 ಕೋಟಿ ರೂ.ನಲ್ಲಿ ರೈತರ ಜಮೀನುಗಳಿಗೆ ತಡೆಗೋಡೆ ನಿರ್ಮಾಣ, 8 ಕೋಟಿ ರೂ.ನಲ್ಲಿ ಭಾರತೀಪುರ- ಕೆಸರೆ ಬದಲಿ ರಸ್ತೆ, ತಲಾ 6.50 ಕೋಟಿ ರೂ.ಗಳ ಪೋಲಿಸ್ ವಸತಿ ಸಂಕೀರ್ಣ, ಅಮೃತ ನಗರೋತ್ಥಾನ ಕಾಮಗಾರಿ ಹಾಗೂ ಆಯುಷ್ ಆಸ್ಪತ್ರೆ ನಿರ್ಮಾಣ, ತಲಾ 5 ಕೋಟಿ ರೂ. ಸರ್ಕಾರಿ ನೌಕರರ ವಸತಿ ಮತ್ತು ಪ್ರವಾಸಿ ಮಂದಿರರ ಅಭಿವೃದ್ಧಿ, ತಲಾ 3 ಕೋಟಿ ರೂ.ಗಳ ಪೋಲಿಸ್ ಸ್ಟೇಷನ್ ಹಾಗೂ ಅಗ್ನಿಶಾಮಕದಳ ಘಟಕ ಇನ್ನೂ ಮುಂತಾದ ಕಾಮಗಾರಿ.

2 ಜ್ಞಾನಪೀಠ, ಮೂವರು ಭಯೋತ್ಪಾದಕರು: ಎರಡು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ಮಹಾನ್ ವ್ಯಕ್ತಿಗಳು ಜನಿಸಿರುವ ತೀರ್ಥಹಳ್ಳಿ ತಾಲೂಕಿಗೆ ಮೂವರು ಭಯೋತ್ಪಾದಕರಿಂದಾಗಿ ಕೆಟ್ಟ ಹೆಸರು ಬಂದಿರುವುದು ಗೃಹ ಸಚಿವನಾಗಿ ನನಗೆ ಬೇಸರ ತಂದಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು. 94ಸಿ ಮಂಜೂರಾತಿ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲು ಸಾಲ ದೊರೆಯದಿರುವುದು ಮತ್ತು ಫಲಾನುಭವಿಗಳಿಗೆ ಪೂರ್ಣ ಹಕ್ಕು ನೀಡದಿದ್ದರೆ ಹಕ್ಕುಪತ್ರವನ್ನು ಒಲೆಗೆ ಹಾಕೋದು ಸೂಕ್ತ ಎಂದರು.