ಜಿಲ್ಲೆ

27ಕ್ಕೆ ಎಂಎಂಸಿ ‘ಮಾ’ ಉತ್ಸವ

ಮೈಸೂರು:ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘವಾದ ‘ಮಾ’ದ ವಾರ್ಷಿಕೋತ್ಸವ ಮೇ 27ರಂದು ಜೆ.ಕೆ ಮೈದಾನದಲ್ಲಿನ ಪ್ಲಾಟಿನಂ ಜ್ಯೂಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಎಸ್.ಚಂದ್ರಶೇಖರ್ ತಿಳಿಸಿದರು.
ಅಂದು ಬೆಳಗ್ಗೆ 9ರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವೈದ್ಯರಿಂದ ಆರು ಉಪನ್ಯಾಸ ಕಾರ್ಯಕ್ರಮವಿರಲಿದೆ. ಮಧ್ಯಾಹ್ನ 2 ಗಂಟೆಗೆ ವಾರ್ಷಿಕ ಮಹಾಸಭೆ ನೆರವೇರಲಿದೆ. ನಂತರ ಸಂಜೆ 6 ಗಂಟೆಗೆ 1962ರ ಸಾಲಿನ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ 20 ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಳೆಯ ಬೇರು ಹಾಗೂ ಹೊಸ ಚಿಗುರಿನ ಸಮ್ಮಿಲನದಂತೆ ‘ಮಾ’ ಉತ್ಸವ ಪ್ರತಿ ವರ್ಷವೂ ನಡೆಯುತ್ತಿದೆ. ಈ ಮೂಲಕ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸಂಬಂಧದ ಸೇತುವೆಯಾಗಿ ತನ್ನ ಕಾರ್ಯ ನಿರ್ವಹಿಸುತ್ತಿದ್ದು ಎಂಎಂಸಿಯ ಸಮಗ್ರ ವಿಕಾಸಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಡಾ.ಎಚ್.ಎನ್. ದಿನೇಶ್, ಡಾ.ಶಶಿಧರ್, ಡಾ.ಕೃಷ್ಣೇಗೌಡ ಇದ್ದರು.