ಸಿದ್ಧಗಂಗಾ ಜಾತ್ರಾ ಮಹೋತ್ಸವಕ್ಕೆ ಕಳೆತಂದ ರಾಸುಗಳು. 
ಜಿಲ್ಲೆ

27ಕ್ಕೆ ಸಿದ್ಧಗಂಗಾ ರಥೋತ್ಸವ

ತುಮಕೂರು ಡೆಸ್ಕ್

ಕಳೆಗಟ್ಟಿದ ದನಗಳ ಪರಿಷೆ - ಹತ್ತು ದಿನ ವಿಶೇಷ ಪೂಜೆ

ತುಮಕೂರು: ಶ್ರೀ ಸಿದ್ಧಗಂಗಾ ಕ್ಷೇತ್ರದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಹಾ ರಥೋತ್ಸವವು ಮಾ ಬಹುಳ ಚತುರ್ದಶಿ ಫೆ.27 ಗುರುವಾರ ಮಧ್ಯಾಹ್ನ 12ಕ್ಕೆ ನಡೆಯಲಿದೆ. ಮಹಾಶಿವರಾತ್ರಿ ಸಂದರ್ಭದಲ್ಲಿ 10 ದಿನ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಶಿವರಾತ್ರಿ ಜಾಗರಣೆ ಬಳಿಕ ಮರುದಿನ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವವು ಶ್ರೀಮಠದ ಆವರಣದಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಮಡಿತೇರಿನ ಬಳಿಕ ರಾತ್ರಿ ರುದ್ರಾಕ್ಷಿ ಮಂಟಪೋತ್ಸವ ನಡೆಯಲಿದೆ.

ೆ.20ರ ಗುರುವಾರದಿಂದ ಮಾ.1ರವರೆಗೆ 10 ದಿನಗಳ ಉತ್ಸವಗಳು ನಡೆಯಲಿವೆ. ಶ್ರೀ ಗೋಸಲ ಸಿದ್ದೇಶ್ವರ ಸ್ವಾಮಿ ಉತ್ಸವ ಹಾಗೂ ಶೂನ್ಯಸಿಂಹಾಸನಾರೋಹಣೋತ್ಸವ, ವೃಷಭವಾಹನ ಮೊದಲದಿನ ಜರುಗಿದವು. 21ರಂದು ನಂದಿವಾಹನ, ಗಜವಾಹನ, 22ರಂದು ಸ್ವಾಮಿಯ ಹುಲಿವಾಹನ, ಸಿಂಹವಾಹನ, 23 ರಂದು ಹುತ್ತದವಾಹನ, ಶೇಷವಾಹನ, 24ರಂದು ಅಶ್ವವಾಹನ, ನವಿಲುವಾಹನ, 25ರಂದು ರಾವಣವಾಹನ, ಬಿಲ್ವವೃಕ್ಷ$$ವಾಹನ, ನವರಂಗಪಾಲಕಿ ಉತ್ಸವಗಳು ನಡೆಯಲಿವೆ. 26ರಂದು ಮಹಾಶಿವಾರಾತ್ರಿ ಪೂಜಾದಿಗಳು, ಬೆಳ್ಳಿರಥೋತ್ಸವ ಹಾಗೂ ಮುತ್ತಿನಪಾಲಕಿ ಉತ್ಸವ ಜರುಗಲಿವೆ. 27ರಂದು ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ.

ಜಾತ್ರೆಗೆ ಕಳೆತಂದ ದನಗಳ ಪರಿಷೆ: ಜಾತ್ರಾ ಮಹೋತ್ಸವ ಆರಂಭಕ್ಕೆ ವಾರ ಮುನ್ನವೇ ನಡೆಯುವ ದನಗಳ ಪರಿಷೆ ಕಳೆಗಟ್ಟಿದೆ. ನಾಡಿನೆಲ್ಲೆಡೆಯಿಂದ ರೈತರು ರಾಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆ ತಂದಿದ್ದಾರೆ. ರಾಜ್ಯ, ಹೊರ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರಾಸುಗಳು ಬಂದಿದ್ದು, ಜಾನುವಾರುಗಳನ್ನು ಖರೀದಿಸಲು ಹಾಗೂ ಮಾರಲು ಶ್ರೀಕ್ಷೇತ್ರಕ್ಕೆ ರೈತರ ದಂಡೇ ಹರಿದು ಬರುತ್ತಿದೆ. ದನಗಳ ಜಾತ್ರೆಗೆ ಹಾಸನ, ಮಂಡ್ಯ, ತುಮಕೂರು, ಮದ್ದೂರು, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಸೇರಿ ಮತ್ತಿತರ ಕಡೆಗಳಿಂದಲೂ ರೈತರು ಜಾನುವಾರುಗಳನ್ನು ತಂದಿದ್ದು, ರಾಸುಗಳನ್ನು ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆ ಪ್ರತಿ ವರ್ಷಕ್ಕಿಂತ ಈ ಬಾರಿ ಬಲು ಜೋರಾಗಿಯೇ ನಡೆದಿದೆ.

ವಿವಿಧ ತಳಿಗಳ ಆಕರ್ಷಣೆ

ರಾಸುಗಳ ಜಾತ್ರೆಗೆ ಈ ಬಾರಿ ಹಳ್ಳಿಕಾರ್​, ಅಮೃತ್​ ಮಹಲ್​, ಕಿಲಾರಿ, ಗಿಡ್ಡ ಹೋರಿ, ನಾಟಿ ಹಸು, ಮಲೆನಾಡ ಗಿಡ್ಡ, ಕೃಷ್ಣ ವ್ಯಾಲಿ ಸೇರಿ ವಿವಿಧ ತಳಿಗಳ ರಾಸುಗಳು ರಾಜ್ಯದ ವಿವಿಧ ಮೂಲೆಗಳಿಂದ ಬಂದು ಸೇರಿದ್ದು, ಇಷ್ಟೂ ತಳಿಗಳನ್ನು ಒಂದೇ ಕಡೆ ನೋಡುವ ಭಾಗ್ಯ ಶ್ರೀಕ್ಷೇತ್ರದಲ್ಲಿ ದೊರೆತಿದೆ. ಈ ಬಾರಿ ಜಾತ್ರೆಯಲ್ಲಿ ರಾಸುಗಳು, ಹೋರಿಗಳು, ಎತ್ತುಗಳ ಬೆಲೆ 50 ಸಾವಿರದಿಂದ 8&-10 ಲಕ್ಷ ರೂ.ವರೆಗೂ ಇವೆ. ಈಗಾಗಲೇ ದನಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಮತ್ತು ಖರೀದಿ ಬಲು ಜೋರಾಗಿ ನಡೆದಿದೆ.

28ರಂದು ಬೆಳ್ಳಿಪಲ್ಲಕ್ಕಿ

ಶಿವರಾತ್ರಿ ಬಳಿಕ ಅಮಾವಾಸ್ಯೆಯಂದು ಫೆ.28ರಂದು ವಿಶ್ವಪ್ರಸಿದ್ಧ ಬೆಳ್ಳಿಪಲ್ಲಕ್ಕಿ ಉತ್ಸವವು ವೈಭವಯುತವಾಗಿ ಜರುಗಲಿದೆ. ಮಾ.1ರಂದು ತೆಪ್ಪೋತ್ಸವ, ಪಂಚಬ್ರಹ್ಮೋತ್ಸವದೊಂದಿಗೆ ಸಿದ್ಧಗಂಗಾ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.