ಜಿಲ್ಲೆ

ಹಾಸನ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗ ತೆರೆಯಲು ಒತ್ತಾಯ

Hassan - Ramesh H R

ಹಾಸನ: ಹಾಸನ ವಿಶ್ವವಿದ್ಯಾಲಯ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಆದರೆ, ಈ ವಿವಿಯಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಇಲ್ಲದಿರುವ ಕೊರತೆಯಿಂದಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ತಣ್ಣೀರೆರಚಿದಂತಾಗಿದೆ.

ರಾಜ್ಯದಲ್ಲಿ ಹಾಸನ ಜಿಲ್ಲೆಯಲ್ಲಿ ಅತಿಹೆಚ್ಚು ಪತ್ರಿಕೋದ್ಯಮ ವಿಷಯ ಹೊಂದಿರುವ ಪದವಿ ಕಾಲೇಜುಗಳಿವೆ. ಆದರೆ, ಹಾಸನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗವಿಲ್ಲ. ಈ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಅವರೆಲ್ಲರೂ ಸ್ನಾತಕೋತ್ತರ ಪದವಿ ಪಡೆಯಬೇಕೆಂದರೆ ಮೈಸೂರು, ತುಮಕೂರು, ಮಂಗಳೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದ ಅನೇಕರು ಸ್ನಾತಕೋತ್ತರ ಪದವಿ ಮುಂದುವರಿಸದೆ ಪದವಿ ವಿದ್ಯಾಭ್ಯಾಸ ಮುಗಿಸಿ ಸ್ನಾತಕೋತ್ತರ ಪದವಿಯನ್ನು ಮೊಟಕುಗೊಳಿಸುತ್ತಿದ್ದಾರೆ. ಹಾಗಾಗಿ, ಹಾಸನ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ತೆರೆಯುವಂತೆ ನೂರಾರು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಹೊರ ಜಿಲ್ಲೆಗಳಿಗೆ ಕಳುಹಿಸಲು ಒಪ್ಪದ ಪಾಲಕರು

ಪತ್ರಿಕೋದ್ಯಮ ಉದ್ಯೋಗದ ಜತೆ ಸಾಮಾನ್ಯ ಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಚಿತ್ರೋದ್ಯಮ ಹೀಗೆ ಹಲವಾರು ಇಲಾಖೆಗಗಳಲ್ಲಿ ಹುದ್ದೆ ಗಿಟ್ಟಿಸುವ ವಿಷಯವಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಷಯ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚು ಓದುತ್ತಿದ್ದಾರೆ. ಹುಡುಗರಿಗೆ ಹೋಲಿಸಿದರೆ ಪತ್ರಿಕೋದ್ಯಮ ವಿಷಯ ವ್ಯಾಸಂಗ ಮಾಡುವವರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಆದರೆ, ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತರ ಪದವಿ ವ್ಯಾಸಂಗ ಪಡೆಯಬೇಕೆಂದರೆ ಮೈಸೂರು, ತುಮಕೂರು, ಬೆಂಗಳೂರು ಹಾಗೂ ಮಂಗಳೂರಿನ ವಿಶ್ವವಿದ್ಯಾಲಯಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ಪಾಲಕರು ತಮ್ಮ ಮಕ್ಕಳನ್ನು ಒಂಟಿಯಾಗಿ ಹೊರ ಜಿಲ್ಲೆಗಳಿಗೆ ಕಳುಹಿಸಿ ಓದಿಸಲು ಹಿಂದೇಟು ಹಾಕುತ್ತಿದ್ದಾರೆ. ದೂರದ ಊರಿನ ವಿದ್ಯಾರ್ಥಿ ನಿಲಯಗಳಲ್ಲಿ ತಮ್ಮ ಮಕ್ಕಳನ್ನು ಉಳಿಸುವುದಕ್ಕೆ ರಕ್ಷಣೆಯ ಭೀತಿ ಕಾಡುತ್ತಿದೆ. ಹಾಗಾಗಿ, ಹಾಸನ ವಿಶ್ವವಿದ್ಯಾಲಯದಲ್ಲೇ ಪತ್ರಿಕೋದ್ಯಮ ವಿಭಾಗ ತೆರೆಯಬೇಕು. ಇದರಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗಲಿದೆ ಎಂಬುದು ಪಾಲಕರು ಒತ್ತಾಸೆಯಾಗಿದೆ.

ಯಾವ್ಯಾವ ಕಾಲೇಜಿನಲ್ಲಿ ಜರ್ನಲಿಸಂ ವಿಷಯವಿದೆ:

ಹಾಸನ ಜಿಲ್ಲೆಯಲ್ಲಿ ಸುಮಾರು 245 ವಿದ್ಯಾರ್ಥಿಗಳು ಪದವಿಯಲ್ಲಿ ಪತ್ರಿಕೋದ್ಯಮ ವಿಷಯ ವ್ಯಾಸಂಗ ಮಾಡುತ್ತಿದ್ದಾರೆ. ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 45, ಗಂಧದ ಕೋಠಿಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 35, ಸರ್ಕಾರಿ ಕಲಾ ವಾಣಿಜ್ಯ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ 100 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ 35 ಮತ್ತು ಹೊಳೆನರಸೀಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 30 ವಿದ್ಯಾರ್ಥಿಗಳು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದಾರೆ. ಈ ಪ್ರಕಾರ ಉಳಿದೆಲ್ಲ ಜಿಲ್ಲೆಗಳಿಗಿಂತ ಹಾಸನ ಜಿಲ್ಲೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದು, ಇವರ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲು ಹಾಸನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗವನ್ನು ತೆರದು ಅನುಕೂಲ ಕಲ್ಪಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಿಷಯವಾಗಿ ಹಾಸನ ವಿವಿಯ ಕುಲಪತಿಗಳ ಜತೆಗೆ ಚರ್ಚೆ ನಡೆಸಿ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದು ಹಾನಸ ವಿವಿಯಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಎಂಎ ಜರ್ನಲಿಸಂ ವಿಭಾಗ ಆರಂಭಿಸುವಂತೆ ಮತ್ತು ವಿಭಾಗಕ್ಕೆ ಸೂಕ್ತ ಪ್ರಾಧ್ಯಾಪಕರನ್ನು ನೇಮಿಸುವಂತೆ ಮನವಿ ಮಾಡುತ್ತೇನೆ ಎಂದು ಶಾಸಕ

ಎಚ್.ಪಿ. ಸ್ವರೂಪ್ ಪ್ರಕಾಶ್ ತಿಳಿಸಿದರು.

ಈಗ ಹೇಮಾ ಗಂಗೋತ್ರಿ ಆವರಣದಲ್ಲಿ ಪ್ರಸ್ತುತ 11 ವಿಭಾಗಗಳಿವೆ. ವಿಶ್ವವಿದ್ಯಾಲಯಕ್ಕೆ ಜನಪ್ರತಿನಿಧಿಗಳು, ಕಾಲೇಜಿನ ಪ್ರಾಂಶುಪಾಲರು, ಸಾರ್ವಜನಿಕರಿಂದ ಇಂತಹ ಒಂದು ವಿಭಾಗದ ಅವಶ್ಯಕತೆ ಇದೆ ಎಂದು ಮನವಿ ಪತ್ರ ನೀಡಿದರೆ ಅದನ್ನು ನಾವು ಸರ್ಕಾರಕ್ಕೆ ಸಲ್ಲಿಸಿ ವಿಭಾಗ ಆರಂಭಕ್ಕೆ ಅನುಮೋದನೆ ಪಡೆದುಕೊಳ್ಳಬಹುದು. ಶೀಘ್ರದಲ್ಲೇ ಇವರಿಂದ ಪತ್ರಗಳು ಬಂದರೆ ನಾನು ಕೂಡ ಶೀಘ್ರದಲ್ಲೇ ಮುಂದಿನ ಕ್ರಮಗಳನ್ನು ಅನುಸರಿಸಿ ವಿಭಾಗ ಆರಂಭಿಸಬಹುದ ಎಂದು ಹಾಸನ ವಿವಿ ಕುಲಪತಿ ಪ್ರೊ. ತಾರಾನಾಥ್ ಹೇಳುತ್ತಾರೆ.