ಜಿಲ್ಲೆ

27,573 ಮಂದಿಗೆ ಮನೆಯಿಂದಲೇ ಮತದಾನ ಭಾಗ್ಯ

ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಈ ವಯೋಮಾನ ಮೀರಿದ (ಮಾ.14ರವರೆಗಿನ ನೋಂದಣಿ ಪ್ರಕಾರ) 27,573 ಮತದಾರರನ್ನು ಗುರ್ತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಜಿಲ್ಲಾ ವರದಿಗಾರರ ಕೂಟದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ ಇವಿಎಂ ಹಾಗೂ ವಿವಿ ಪ್ಯಾಟ್ ನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆ ವೇಳೆ ಮಾತನಾಡಿದರು. ಜಿಲ್ಲೆಯಲ್ಲಿ 80ರಿಂದ 89 ವರ್ಷದೊಳಗಿನವರು 23356, 90ರಿಂದ 99ರ ವಯೋಮಿತಿಯವರು 4007 ಮಂದಿ ಹಾಗೂ ಶತಾಯುಷಿಗಳು 213 ಮಂದಿ ಇದ್ದಾರೆ. 80 ವರ್ಷ ಮೇಲ್ಪಟ್ಟ ವಿಕಲಾಂಗರು, ತೀವ್ರ ಅಸ್ವಸ್ಥರಾದವರು, ಕೋವಿಡ್‌ನಿಂದ ತುತ್ತಾದವರು ಕೂಡ ಮನೆಯಿಂದಲೆ ಮತ ಚಲಾಯಿಸಬಹುದಾಗಿದೆ ಎಂದರು. ಚುನಾವಣೆ ಘೋಷಣೆಯಾದ ನಂತರದಲ್ಲಿ ಬಿಎಲ್‌ಒಗಳೇ ಇಂಥವರ ಮನೆಗಳಿಗೆ ತೆರಳಿ ಮತದಾನ ಮಾಡುವ ಸಂಬಂಧ 12 ಡಿ ಅರ್ಜಿ ನೀಡಿ, ತುಂಬಿಸಿಕೊಳ್ಳುತ್ತಾರೆ. ತದನಂತರದಲ್ಲಿ ಅಂಚೆ ಪತ್ರ ನಮೂನೆಯಲ್ಲೇ ಮತದಾನ ಮಾಡಬಹುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಈ ಬಾರಿ 28639 ಹೊಸ (18-19 ವರ್ಷದವರು) ಮತದಾರರಿದ್ದಾರೆ. 20ರೊಂದ 29 ವಯೋಮಾನದವರು 2,80023 ಮಂದಿ ಗುರ್ತಿಸಲಾಗಿದೆ. ಮಾ.16ರವರೆಗಿನ ನೋಂದಣಿ ಪ್ರಕಾರ ಜಿಲ್ಲೆಯಲ್ಲಿ 19215 ವಿಕಲಾಂಗ ಮತದಾರರಿದ್ದಾರೆ. ಇದರಲ್ಲಿ 11256 ಪುರುಷ ಹಾಗೂ 7959 ಮಹಿಳಾ ವಿಕಲಾಂಗರಿದ್ದಾರೆ. 1112 ಮಂದಿ ಜನಪ್ರತಿನಿಧಿ ಮತದಾರರಿದ್ದಾರೆ ಎಂದು ವಿವರಿಸಿದರು. ಎಡಿಸಿ ಪಿ.ಎನ್.ಲೋಕೇಶ್, ಚುನಾವಣಾ ತಹಸೀಲ್ದಾರ್ ಅರುಣ್ ಕಾರ್ಗಿ, ಉಪ ತಹಸೀಲ್ದಾರ್ ಶ್ರೀಕುಮಾರ್, ಪುನೀತ್, ವರದಿಗಾರರ ಕೂಟದ ಅಧ್ಯಕ್ಷ ಏಕಾಂತಪ್ಪ, ಜಿಲ್ಲಾ ವಾರ್ತಾಧಿಕಾರಿ ಕುಳಗಟ್ಟೆ ರಂಗನಾಥ್ ಇದ್ದರು. ಮಾದರಿ ನೀತಿ ಸಂಹಿತೆ ಸದ್ಯಕ್ಕೆ ಜಾರಿ ಇಲ್ಲವದರೂ ಸಾಮಾನ್ಯ ಚುನಾವಣಾ ನಿಯಮದನ್ವಯ ಈಗಾಗಲೆ ವಿವಿಧೆಡೆ ಹಾಕಲಾದ ಬ್ಯಾನರ್, ಬಂಟಿಂಗ್ಸ್ ಇತರೆ ಚುನಾವಣಾ ಪ್ರಚಾರ ಪರಿಕರಗಳನ್ನು ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಇದುವರೆಗೆ 16 ಗೋಡೆ ಬರಹ, 244 ಪೋಸ್ಟರ್, 117 ಬ್ಯಾನರ್ ಹಾಗೂ ಕರಪತ್ರ ಮತ್ತಿತರೆ ಪ್ರಚಾರದ 509 ಪರಿಕರಗಳನ್ನು ತೆರವುಗೊಳಿಸಲಾಗಿದೆ. ಮದ್ಯ ಮಾರಾಟದ ನಿಯಮ ಉಲ್ಲಂಘನೆಯಡಿ ಮಾ.6ರಿಂದ 15ರ ವರೆಗೆ 59504 ರೂ. ಮೌಲ್ಯದ 122.58 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮತದಾರರಿಗೆ ಹಂಚಿಕೆಯಾಗುವ ಉದ್ದೇಶದಿಂದ ಎಲ್ಲಿಯಾದರೂ ಸಾಮಗ್ರಿಗಳು ದಾಸ್ತಾನಿವೆಯೆ ಎಂದು ವಿವಿಧ ಗೋದಾಮುಗಳನ್ನು ಪರಿಶೀಲಿಸಲಾಗುತ್ತಿದ್ದು, ನಿರಂತರ ನಿಗಾ ವಹಿಸಲಾಗಿದೆ ಡಿಸಿ ವಿವರಿಸಿದರು.