ಜಿಲ್ಲೆ

ಉದ್ಯೋಗಕ್ಕೆ ಆಯ್ಕೆಯಾದ 270 ವಿದ್ಯಾರ್ಥಿಗಳು

ರಾಜಣ್ಣ


ಅರಸೀಕೆರೆ ಗ್ರಾಮಾಂತರ: ತಾಲೂಕಿನ ಮಾಲೇಕಲ್ಲು ತಿರುಪತಿಯಲ್ಲಿರುವ ಶ್ರೀಚಂದ್ರಶೇಖರ ಭಾರತಿ ಐಟಿಐ ಕಾಲೇಜು ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಆಗಮಿಸಿದ್ದ ವಿವಿಧ ಕಂಪನಿಗಳ ಪ್ರತಿನಿಧಿಗಳು 270 ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.


ಮಂಗಳವಾರ ನಡೆದ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಂದ್ರಶೇಖರ ಭಾರತೀ ವಿದ್ಯಾ ದತ್ತಿ ನಿರ್ದೇಶಕ ಟಿ.ಆರ್.ನಾಗರಾಜ್, ಗ್ರಾಮೀಣ ಮಕ್ಕಳಿಗೆ ಉದ್ಯೋಗ ಭವಿಷ್ಯ ನೀಡುವ ಸಲುವಾಗಿಯೇ ಇಲ್ಲಿ ಐಟಿಐ ಪ್ರಾರಂಭಿಸಲಾಗಿದ್ದು, ಸಂಸ್ಥಾಪಕರ ಮೂಲ ಉದ್ದೇಶ ಸಾಕಾರಗೊಳ್ಳುತ್ತಿದೆ. ಪರಿಶ್ರಮವಿಲ್ಲದೆ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ, ಉದ್ಯೋಗ ದೊರೆತಾಗ ಶಿಸ್ತು ಮತ್ತು ಪ್ರಾಮಾಣಿಕತೆ ಬಹಳ ಅಗತ್ಯ, ಅದನ್ನು ಅಳವಡಿಸಿಕೊಳ್ಳಬೇಕು, ವಿದ್ಯಾರ್ಥಿ ಜೀವನದಿಂದಲೇ ಕಲಿಕಾ ಆಸಕ್ತಿ ಮತ್ತು ಶ್ರದ್ಧೆ ಹೊಂದಿದ್ದಲ್ಲಿ ಸುಲಭವಾಗಿ ಉದ್ಯೋಗ ದೊರೆಯುತ್ತದೆ. ವಿವಿಧ ಕಂಪನಿಗಳ ಪ್ರತಿನಿಧಿಗಳು ಆಗಮಿಸಿ ಉದ್ಯೋಗ ನೀಡಲು ಮುಂದೆ ಬಂದಿರುವುದು ಹರ್ಷ ತಂದಿದೆ ಎಂದರು.


ಶ್ರೀಚಂದ್ರಶೇಖರ ಭಾರತಿ ಐಟಿಐ ಪ್ರಾಚಾರ್ಯ ಸುರೇಶ್ ಮಾತನಾಡಿ, ನಮ್ಮ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಲುವಾಗಿ ಕಾಲೇಜನ್ನು ತೆರೆದು ಅನೇಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಕಾರಣರಾಗಿದ್ದಾರೆ ಎಂದರು.


ಉದ್ಯೋಗದಾತರಾದ ಬಯೋಟೆಕ್ ಬ್ರಾೃಂಚ್ ಮ್ಯಾನೇಜರ್ ಹರೀಶ್ ಅಕ್ಷಯ್, ಇನ್ ಕ್ಯಾಪ್ ಕಂಪನಿಯ ಸೀನಿಯರ್ ಎಕ್ಸಿಕ್ಯೂಟಿವ್ ಆನಂದ್, ಅರ್ಹ ಟೆಕ್ ಕಂಪನಿಯ ಜ್ಞಾನೇಶ್ ಅವರು ಮಾತನಾಡಿ, ತಮ್ಮ ತಮ್ಮ ಕಂಪನಿಯ ಬಗೆಗೆ ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಸಂತೋಷ್, ಉದ್ಯೋಗ ಆಕಾಂಕ್ಷಿಗಳಿಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮ ಪ್ರಾರಂಭಕ್ಕೆ ಮೊದಲು ಶ್ರೀಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಹಂಸಿತಾ ಮೌದ್ಗಲ್ಯಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 4ನೇ ರ‌್ಯಾಂಕ್ ಗಳಿಸಿದ್ದು, ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಯನ್ನುಅಭಿನಂದಿಸಲಾಯಿತು.
ಚಂದ್ರಶೇಖರ ಭಾರತಿ ಶಾಲಾ ಆಡಳಿತಾಧಿಕಾರಿ ಸಾಲಪುರ ಗೋಪಾಲ್, ಸಂಸ್ಥೆಯ ಸದಸ್ಯ ಹಾಗೂ ತಾಲೂಕು ಬ್ರಾಹ್ಮಣ ಸಂಘದ ನಿರ್ದೇಶಕ ಕಳಸಾಪುರ ರಘು, ಕಾಲೇಜು ಅಧೀಕ್ಷಕ ಅಶೋಕ್ ನಾಡಿಗ್
ಉಪಸ್ಥಿತರಿದ್ದರು.