ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕಾಗಿ ನಿರ್ಮಿಸಲಿರುವ ವೇದಿಕೆ ಹಾಗೂ ಮಾನವ ಮಂಟಪಕ್ಕೆ ಕಾರ್ಜುವಳ್ಳಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮತ್ತು ಗಣ್ಯರು ಭೂಮಿಪೂಜೆ ನೆರವೇರಿಸಿದರು. ಕೊರಟಿಕೆರೆ ಪ್ರಕಾಶ್, ನಟರಾಜ್ ಇತರರು ಇದ್ದರು. 
ಜಿಲ್ಲೆ

26ರಿಂದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಬೇಲೂರು: ಸೆ.26ರಿಂದ ಅ.5ರವರೆಗೆ ಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನದ ಮಾನವ ಮಂಟಪದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ 31ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಅದ್ದೂರಿಯಾಗಿ ನೆರವೇರಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ.ಎಸ್.ಲಿಂಗೇಶ್ ಮನವಿ ಮಾಡಿದರು.


ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಜನಜಾಗೃತಿ ಧರ್ಮ ಸಮ್ಮೇಳನ ಅಂಗವಾಗಿ ಸೆ.25 ರಂದು ಸಂಜೆ 4ಕ್ಕೆ ಜಗದ್ಗುರುಗಳು ಪಟ್ಟಣದ ನೆಹರು ನಗರದ ಮೂಲಕ ಪುರ ಪ್ರವೇಶ ಮಾಡಲಿದ್ದಾರೆ. ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆ ತರಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮಾಜಿ ಪ್ರದಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ. ಸಮಾಜದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಶಿವಾಗಮಗಳು ಮತ್ತು ವಚನ ಸಾಹಿತ್ಯ ಮಹಾಪ್ರಬಂಧ, ರಂಭಾಪುರಿ ಪೀಠದ ಸಾಂಸ್ಕೃತಿಕ ಅಧ್ಯಯನ ಮಹಾಪ್ರಬಂಧ, ಸಂಶೋಧನಾತ್ಮಕ ಕೃತಿಗಳು, ರಂಭಾಪುರಿ ಬೆಳಗು, ಪಂಚಾಚಾರ್ಯ ಪ್ರಭಾ ಬಿಡುಗಡೆಗೊಳ್ಳಲಿವೆ. ಕವಿ, ಕಲಾವಿದರಿಗೆ ಶ್ರೀಗಳು ಗುರುರಕ್ಷೆ ನೀಡಿ ಆಶೀರ್ವದಿಸಲಿದ್ದಾರೆ ಎಂದು ಮಾಹಿತಿ ನೀಡಿದರು.


ಸಮಾರಂಭದಲ್ಲಿ ನಿತ್ಯ 20 ರಿಂದ 25 ಸಾವಿರ ಜನರು ಭಾಗವಹಿಸಲಿದ್ದಾರೆ. 10 ಸಾವಿರ ಜನರು ಕುಳಿತುಕೊಳ್ಳಲು ಪೆಂಡಾಲ್, 40 ಕ್ಕೂ ಹೆಚ್ಚು ಜನರು ಕೂರುವ ವೇದಿಕೆ, ಕಾರ್ಯಕ್ರಮ ವೀಕ್ಷಣೆಗೆ 6 ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುವುದು. ನಿತ್ಯ 10 ಸಾವಿರಕ್ಕೂ ಹೆಚ್ಚು ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಗಂಟೆಗೆ 3 ಸಾವಿರ ಜನರಿಗೆ ಊಟ ಬಡಿಸಲು 20 ಕೌಂಟರ್ ತೆರೆಯಲಾಗಿದೆ. ಅಲ್ಲದೆ ಬೇಲೂರು ಪ್ರವೇಶಿಸುವವರಿಗೆ ಪಟ್ಟಣದ ಹೊರ ವಲಯದಲ್ಲೇ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಹೊರ ಜಿಲ್ಲೆ ಮತ್ತು ತಾಲೂಕುಗಳಿಂದ ಬರುವವರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.


ಮೈಸೂರು ದಸರಾ ಮಾದರಿಯಲ್ಲಿ ಪಟ್ಟಣದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗುವುದು. ನಿತ್ಯ ಬೆಳಗ್ಗೆ 9 ಗಂಟೆಗೆ ಗುರುಗಳಿಂದ ವೀರಶೈವ ಸಭಾ ಭವನದಲ್ಲಿ ಇಷ್ಟಲಿಂಗ ಪೂಜೆ, ಧರ್ಮೋಪದೇಶ ನಡೆಯಲಿದೆ. ಸಂಜೆ 7ಕ್ಕೆ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಯಲಿದೆ. ಎಲ್ಲ ಧರ್ಮದವರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪಕ್ಷಾತೀತವಾಗಿ ಆಯೋಜಿಸಲಾಗುತ್ತಿದೆ ಎಂದರು.


ಸಮಿತಿ ಕಾಯಾಧ್ಯಕ್ಷ ಕೊರಟಿಕೆರೆ ಪ್ರಕಾಶ್ ಮಾತನಾಡಿ, 11 ದಿನವೂ ಸಮ್ಮೇಳನ ವಿಜೃಂಭಣೆಯಿಂದ ನಡೆಯಲಿದೆ. ಗುರುಗಳ ಪುರಪ್ರವೇಶ ಹಾಗೂ ಭವ್ಯ ಮೆರವಣಿಗೆ ಸಂದರ್ಭ ಮಂಗಳವಾದ್ಯ, ವಾದ್ಯಗೋಷ್ಠಿ, ನಾದಸ್ವರ, ಕರಡಿವಾದ್ಯ, ಚಿಟ್ಟಿಮೇಳ, ನಾಸಿಕ್‌ಡೋಲ್, ನಂದಿಕೋಲು, ಡೊಳ್ಳು, ಕೋಲಾಟ ಹಾಗೂ ಸಾಂಸ್ಕೃತಿಕ ಮೇಳಗಳು ಮೆರುಗು ನೀಡಲಿವೆೆ. 1008 ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಲಿದ್ದಾರೆ ಎಂದರು.


ಸಮ್ಮೇಳನ ಸಮಿತಿ ಕೋಶಾಧ್ಯಕ್ಷ ನಟರಾಜ್, ಮಾಧ್ಯಮ ಸಮಿತಿ ಅಧ್ಯಕ್ಷ ಎಚ್.ಎಂ.ದಯಾನಂದ್, ಪ್ರಚಾರ ಸಮಿತಿ ಅಧ್ಯಕ್ಷ ಹಗರೆ ದಿಲೀಪ್, ದಾಸೋಹ ಸಮಿತಿ ಅಧ್ಯಕ್ಷ ಚೇತನ್ ಕುಮಾರ್, ವೀರಶೈವ ಮಾಹಾಸಭಾ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡ ವಿಕ್ರಂ ಕೌರಿ ಸುದ್ದಿಗೋಷ್ಠಿಯಲ್ಲಿದ್ದರು.