ಜಿಲ್ಲೆ

26ರಿಂದ ಪಾರಂಪರಿಕ ವೈದ್ಯರ ರಾಷ್ಟ್ರೀಯ ಸಮ್ಮೇಳನ

ಹಾಸನ: ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಮತ್ತು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಮಂಸ್ಥಾನದ ವತಿಯಿಂದ ಅ.26ರಿಂದ 28 ರವರೆಗೆ ಮೂರು ದಿನಗಳ ಕಾಲ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ತಿಳಿಸಿದರು.

ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಉಪಸ್ಥಿತಿ ವಹಿಸಲಿದ್ದಾರೆ. ಪರಿಷತ್ತಿನ ಗೌರವಾಧ್ಯಕ್ಷ ರಾಜ್ಯಾಧ್ಯಕ್ಷ ಜಿ. ಮಹದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಉದ್ಘಾಟನೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಅವರು 3000 ಪಾರಂಪರಿಕ ವೈದ್ಯರ ಮಾಹಿತಿ ಕೋಶವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಪ್ರೊ. ವಿಷ್ಣುಕಾಂತ್ ಚಟಪಲ್ಲಿ, ಬೆಂಗಳೂರು ಆಯುಶ್ ಆಯುಕ್ತರಾದ ಡಾ. ಲೀಲಾವತಿ, ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ಐಎಎಸ್ ಅಧಿಕಾರಿ ಜಗತ್ ಸೇರಿದಂತೆ ಹಲವು ಮಠಾಧೀಶರು, ಶಾಸಕರು, ಪರಿಷತ್ತಿನ ಸಂಸ್ಥಾಪಕ ಗಾನಂ ಶ್ರೀಕಂಠಯ್ಯ, ಹರಿರಾಮಮೂರ್ತಿ, ಡಾ. ಸತ್ಯನಾರಾಯಣ ಭಟ್ ಭಾಗವಹಿಸುವರು ಎಂದರು.

3 ದಿನ ಸಮ್ಮೇಳನದಲ್ಲಿ ಕೊರೋನಾದಂತ ರೋಗಗಳು ಮತ್ತು ಜ್ವರ, ಸ್ತ್ರೀ ರೋಗ, ಸಂಧಿವಾತ, ಚರ್ಮರೋಗ, ಪಶುವೈದ್ಯ, ಮಧುಮೇಹ ರೋಗಗಳ ಬಗ್ಗೆ ಗೋಷ್ಠಿ ನಡೆಸಲಾಗುವುದು. ಹಿರಿಯ ಅನುಭವಿ 5 ಪಾರಂಪರಿಕ ವೈದ್ಯರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ನೀಡಲಾಗುವುದು. ಸಮ್ಮೇಳನದಲ್ಲಿ ಹೊರ ರಾಜ್ಯ 500ಕ್ಕೂ ಹೆಚ್ಚು ಪಾರಂಪರಿಕ ವೈದ್ಯರು ಹಾಗೂ ರಾಜ್ಯದ 2500ಕ್ಕೂ ಹೆಚ್ಚು ವೈದ್ಯರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಇದೇ ವೇಳೆ ಹಾಸನ ತಾಲೂಕು ಅಧ್ಯಕ್ಷ ರುದ್ರಯ್ಯ, ವಿಶ್ವನಾಥ್, ಕೃಷ್ಣೇಗೌಡ, ಲವಕುಮಾರ್, ಮಹೇಶ್ ಇದ್ದರು.