ಜಿಲ್ಲೆ

26ರಂದು ಕುಶಾಲನಗರದಲ್ಲಿ ಕ್ರೀಡಾಕೂಟ

ಶನಿವಾರಸಂತೆ: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಸಮಾಜದ ಬಾಂಧವರಿಗಾಗಿ ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಫೆ.26ರಂದು ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋಕ್ಷಿಕ್ ರಾಜ್ ಹೇಳಿದರು.


ಕ್ರೀಡಾಕೂಟದ ಪ್ರಯುಕ್ತ ಅಂದು ಬೆಳಗ್ಗೆ ಕುಶಾಲನಗರ ಗಣಪತಿ ದೇವಸ್ಥಾನದಿಂದ ಆಟದ ಮೈದಾನದವರೆಗೆ ಕ್ರೀಡಾಜ್ಯೋತಿ ಮೆರವಣಿಗೆ ನಡೆಯಲಿದೆ. ಬಳಿಕ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಮಕ್ಕಳು, ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆ ಜರುಗಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್ ಮಾತನಾಡಿ, ಮಾರ್ಚ್ 3ರಂದು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಸಮಾಜದ ಬಾಂಧವರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಂ. ಕಾಂತರಾಜ್, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಬಿ.ಹಾಲಪ್ಪ, ತಾಲೂಕು ಯುವ ಘಟಕದ ಅಧ್ಯಕ್ಷ ಆದರ್ಶ ಹಾಜರಿದ್ದರು.